ಹುನಗುಂದ : ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಸತಿ ನಿಲಯಗಳನ್ನು ಸ್ಥಾಪಿಸುವ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಧೀಮಂತ ನಾಯಕ ಎಂದು ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಡಿ. ದೇವರಾಜ ಅರಸು ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವರಾಜ ಅರಸು 110ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಅರಸು ತಳಮಟ್ಟದ, ಶೋಷಿತರ ಪರ ಧ್ವನಿಯಾಗಿ ಕಾರ್ಯನಿರ್ವಹಿಸಿದ ಸಾಮಾಜಿಕ ಹರಿಕಾರ ಎಂದರು.
ಹಿರೇಬಾದವಾಡಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಮುರ್ತುಜಾಬೇಗಂ ಕೊಡಗಲಿ ಉಪನ್ಯಾಸ ನೀಡಿ, ದೇವರಾಜ ಅರಸು ಅವರು ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆ ಮತ್ತು ಜಾಗೃತಿ ಮೂಡಿಸಿದರು. ಎಲ್ಲರೂ ಸಮಾನಾಗಿ ಬದುಕುವ ಹಕ್ಕನ್ನು ನೀಡಿದರು ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಅತಿ ಹೆಚ್ಚು ಅಂಕ ಪಡೆದ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ ಮಾಟೂರು, ತಾ.ಪಂ ಇಒ ಮುರುಳಿಧರ ದೇಶಪಾಂಡೆ, ಸುಭಾಷ ಸುಲ್ಪಿ, ಎಂ.ಎಚ್. ಕಟ್ಟಿಮನಿ, ವಿ.ಎ. ಗಿರಿತಮ್ಮಣ್ಣವರ, ಸುಮಿತ್ರಾ ಜುಟ್ಲಾ ಇತರರಿದ್ದರು. ಪ್ರಕಾಶ ಬಿರಕಬ್ಬಿ ಸ್ವಾಗತಿಸಿದರು. ಸಂಗನಗೌಡ ನಾಡಗೌಡ ನಿರೂಪಿಸಿದರು. ಎಂ.ಎ. ಮಕಾನದಾರ ವಂದಿಸಿದರು.