ಶಿರಾ: ನಗರದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿವಿಧ ರಾಜಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ವಿವಾಹ ವಿಚ್ಚೇದನ ಪ್ರಕರಣಗಳ ಪೈಕಿ ಬಾಲಕೃಷ್ಣಗೌಡ ಮತ್ತು ರಂಜಿತಾ ಹಾಗೂ ತಿಪ್ಪೇಸ್ವಾಮಿ ಮತ್ತು ಚಂದ್ರಕಲಾ ದಂಪತಿಗಳ ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಗೀತಾಂಜಲಿ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನರಸಿಂಹಮೂರ್ತಿ ಸಮ್ಮುಖದಲ್ಲಿ ರಾಜಿ ಮಾಡಲಾಯಿತು. ಕಳೆದ 10 ವರ್ಷಗಳಿಂದ ವಕೀಲ ಜಗದೀಶ್ ನಡೆಸುತ್ತಿದ್ದ ಗಂಗಮ್ಮ, ರಂಗಧಾಮಯ್ಯ ಮತ್ತು ಇತರ ಕುಟುಂಬಗಳ ವ್ಯಾಜ್ಯ ಪ್ರಕರಣ ಸೇರಿದಂತೆ ಅನೇಕ ಬ್ಯಾಂಕ್ ಮತ್ತು ಮೋಟಾರ್ ವಾಹನ ಕಾಯ್ದೆಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಧರಣೇಶ್ಗೌಡ, ಕಾರ್ಯದರ್ಶಿ ಎಚ್.ಗುರುಮೂರ್ತಿಗೌಡ, ವಾಜಿದ್ ಅಹಮದ್, ಉಮೇಶ್, ಭೂಪತಿ ಗೌಡ , ರಘು ಮಂಜುನಾಥ್ ಇತರರು ಇದ್ದರು.