ಪಿರಿಯಾಪಟ್ಟಣ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ಸಿ.ಬಿ.ಶಿವಕುಮಾರ್ ಮತ್ತು ಕೀರ್ತನಾ ದಂಪತಿಯನ್ನು ನ್ಯಾಯಾಧೀಶ ರಾಜು ಅವರು ಮನವೊಲಿಸಿ ಒಂದಾಗಿಸಿದರು. ವಕೀಲರಾದ ಸಿ.ಜಿ.ಗಣೇಶ್ ಮತ್ತು ಎನ್.ಕರುಣಾಕರ್ ಇತರರು ಇದ್ದರು.  
ಜಿಲ್ಲೆ

ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿ

ಮಾದೇಶ್ ತಿ.ನರಸೀಪುರ

ಪಿರಿಯಾಪಟ್ಟಣ: ವಿವಾಹ ವಿಚ್ಛೇದನದ ಮೂಲಕ ಬೇರೆಯಾಗಲು ನ್ಯಾಯಾಲಯದ ಮೊರೆ ಹೋಗಿದ್ದ ದಂಪತಿಯನ್ನು ನ್ಯಾಯಾಧೀಶರು ಮನವೊಲಿಸಿ ಮತ್ತೆ ಒಂದಾಗುವಂತೆ ಮಾಡಿದರು.

ತಾಲೂಕಿನ ಚೌತಿ ಗ್ರಾಮದ ಸಿ.ಬಿ.ಶಿವಕುಮಾರ್ ಮತ್ತು ಕೀರ್ತನಾ ಎರಡುವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು. ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದರಿಂದ ವಿವಾಹ ವಿಚ್ಛೇದನಕ್ಕಾಗಿ ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಶನಿವಾರ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶ ರಾಜು ಅವರು ಇಬ್ಬರು ಕಕ್ಷಿದಾರರ ವಕೀಲರಾದ ಸಿ.ಜಿ.ಗಣೇಶ್ ಮತ್ತು ಎನ್.ಕರುಣಾಕರ್ ಸಹಕಾರದಿಂದ ನಡೆಸಿದ ಸಂಧಾನದಲ್ಲಿ ಮನವೊಲಿಸಿ ದಂಪತಿ ಮತ್ತೆ ಒಂದಾಗಿ ಬಾಳಲು ಪರಸ್ಪರ ಒಪ್ಪಿಗೆ ಸೂಚಿಸಿದರು.

ನಂತರ ದಂಪತಿ ಒಂದಾದ ಸಂತಸದಲ್ಲಿ ವಕೀಲರು, ನ್ಯಾಯಾಲಯ ಸಿಬ್ಬಂದಿ, ಸಾರ್ವಜನಿಕರಿಗೆ ಸಿಹಿ ಹಂಚಿ ಖುಷಿಪಟ್ಟರು. ವಕೀಲರಾದ ಕೆ.ಭಾಸ್ಕರ್, ಸುಭಾಷ್, ಎಂ.ಜೆ.ಸ್ವಾಮಿ, ಪವನ್, ಹರೀಶ್, ಗುರುಪ್ರಸಾದ್ ಇತರರು ಇದ್ದರು.