ಮೈಸೂರು: ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಗಂಡನನ್ನು ಉಳಿಸಿಕೊಳ್ಳಲು ಮಾಂಗಲ್ಯ ಸರ ಮಾರಿ ಹಣವನ್ನ ಆಸ್ಪತ್ರೆಗೆ ಕಟ್ಟಿದರೂ ಗಂಡ ಬದುಕಲಿಲ್ಲ. ಅತ್ತ ಬಾಕಿ ಬಿಲ್ ಕಟ್ಟುವಂತೆ ಶವ ಕೊಡದೆ ಆಸ್ಪತ್ರೆಯವರು ಸತಾಯಿಸುತ್ತ ಆ ಹೆಣ್ಣುಮಗಳಿಗೆ ಮತ್ತಷ್ಟು ಕಷ್ಟ ಕೊಟ್ಟ ಘಟನೆ ಮೈಸೂರಿನಲ್ಲಿ ಸಂಭವಿಸಿದೆ.
ಆಲನಹಳ್ಳಿಯ ಬಸವರಾಜು ಅವರಿಗೆ ಕರೊನಾ ಸೋಂಕು ತಗುಲಿತ್ತು. ಶ್ರೀರಾಂಪುರ ಬಳಿ ಪ್ರೇರಣಾ ಆಸ್ಪತ್ರೆ ನಿರ್ವಹಣೆಯಲ್ಲಿರುವ ಗೌತಮ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಸವರಾಜುನನ್ನು ದಾಖಲಿಸಲಾಗಿತ್ತು. ಚಿಕಿತ್ಸಾವೆಚ್ಚ ಭರಿಸಲು ಹಣ ಇಲ್ಲದ ಪರದಾಡುತ್ತಿದ್ದ ಬಸವರಾಜು ಪತ್ನಿ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನೇ ಮಾರಿ ಆಸ್ಪತ್ರೆಗೆ 90 ಸಾವಿರ ರೂಪಾಯಿ ಕಟ್ಟಿದ್ದರು. ನಿನ್ನೆ(ಗುರುವಾರ) ಬಸವರಾಜು ಆಸ್ಪತ್ರೆಯಲ್ಲೇ ಮೃತಪಟ್ಟರು. ಗಂಡನ ಶವ ಕೊಡಿ ಎಂದು ಕಣ್ಣೀರಿಟ್ಟರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಕೊಡಲಿಲ್ಲ.
ಬಾಕಿ ಶುಲ್ಕ ಒಂದೂವರೆ ಲಕ್ಷ ರೂ. ಪಾವತಿಸಿದ ಬಳಿಕವಷ್ಟೆ ಶವ ಕೊಡುತ್ತೇವೆ ಎಂದು ಆಸ್ಪತ್ರೆಯವರು ಹೇಳಿದ್ದರು. ಹಣ ನೀಡುವವರೆಗೂ ಹೆಣ ನೀಡೋದಿಲ್ಲ ಎಂದು ಆಸ್ಪತ್ರೆಯವರು ಅಮಾನವೀಯವಾಗಿ ವರ್ತಿಸಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರಾದ ಅಪ್ಪಣ್ಣ ಮತ್ತು ಎಚ್.ವಿ.ರಾಜೀವ್ ಅವರು ಆಸ್ಪತ್ರೆಯ ಆಡಳಿತ ಮಂಡಳಿಗೆ ಎಚ್ಚರಿಕೆ ಕೊಟ್ಟು ಶವವನ್ನು ಮೃತರ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.