ಬೆಳಗಾವಿ: ಪತ್ನಿಯ ಕಾಟ ತಾಳಲಾರದೆ 26 ಲಕ್ಷ ರೂ. ನಗದು ಹಣದೊಂದಿಗೆ ಮುಂಬೈನಿಂದ ಗೋವಾಗೆ ಕಾರಿನಲ್ಲಿ ಹೊರಟಿದ್ದ ಗುತ್ತಿಗೆದಾರನೊಬ್ಬ ಬೆಳಗಾವಿಯಲ್ಲಿ ಪೊಲೀಸರ ಕೈಗೆ ಶನಿವಾರ ಸಿಕ್ಕಿಹಾಕಿಕೊಂಡಿದ್ದಾನೆ.
ಮುಂಬೈನ ರಮಾಭಾಯಿ ಅಂಬೇಡ್ಕರ್ ನಗರದ ಬಡಾಲ ನರಬಾಗೆ ಪೊಲೀಸರ ಕೈಗೆ ಸಿಕ್ಕ ವ್ಯಕ್ತಿ. ಬೆಳಗಾವಿಯ ಕರ್ನಾಟಕ ಚೌಕ್ ಬಳಿ ಇರುವ ಚೆಕ್‌ಪೋಸ್ಟ್‌ನಲ್ಲಿ 26 ಲಕ್ಷ ರೂ. ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಗೂಗಲ್ ಮ್ಯಾಪ್ ಬಳಸಿ ಮುಂಬೈನಿಂದ ಗೋವಾಕ್ಕೆ ಹೋಗುವಾಗ ಬೆಳಗಾವಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ನಗದು ಪತ್ತೆಯಾಗಿದೆ. ಗುತ್ತಿಗೆದಾರನಿಂದ ಹಣ ಜಪ್ತಿ ಮಾಡಿದ್ದು, ಆದಾಯ ತೆರಿಗೆ ಇಲಾಖೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ತಾನು ಒಯ್ಯುತ್ತಿದ್ದ ಹಣಕ್ಕೆ ದಾಖಲೆ ಇದೆ. ತಾನು ಮುಂಬೈನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಆಗಿದ್ದೇನೆ ಎಂದು ತಿಳಿಸಿದ್ದಾನೆ. ಆಗ ಪೊಲೀಸರು ಇಷ್ಟೊಂದು ಮೊತ್ತದ ನಗದು ಏಕೆ ಒಯ್ಯುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಹೆಂಡತಿ ಕಾಟ ತಾಳಲಾರದೆ ನೆಮ್ಮದಿ ಅರಸಿ ಹೋಗುತ್ತಿದ್ದೇನೆ. ಆನ್‌ಲೈನ್ ಪೇಮೆಂಟ್ ಮಾಡಿದರೆ ಬ್ಯಾಂಕ್ ಟ್ರ್ಯಾಂಜಾಕ್ಷನ್ ಮೂಲಕ ಆಕೆಗೆ ಗೊತ್ತಾಗುತ್ತದೆ ಎಂದು ಖರ್ಚಿಗಾಗಿ ನಗದು ಒಯ್ಯುತ್ತಿದ್ದೇನೆ. ಗೂಗಲ್ ಮ್ಯಾಪ್ ಮೂಲಕ ಮಾರ್ಗ ನೋಡುತ್ತಿದ್ದಾಗ ತಪ್ಪಾಗಿ ಸಿಟಿಯೊಳಗೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ. ಇತ್ತ ಹಣದ ಮೂಲದ ಬಗ್ಗೆ ಪೊಲೀಸರು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.