ಜಿಲ್ಲೆ

ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ: ಕೆಪಿಸಿಸಿ ವಕ್ತಾರ ಡಾ.ಶಂಕರ್ ಸೇರಿ ಹಲವರನ್ನ ವಶಕ್ಕೆ ಪಡೆದ ಖಾಕಿ ಪಡೆ

arunakunigal

ಬೆಂಗಳೂರು: ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್​ ಹತ್ಯೆ ಪ್ರಕರಣ ಖಂಡಿಸಿ ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ಅಸ್ತ್ರ ಪ್ರಯೋಗಿಸುತ್ತಿರುವ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ವಿವಾದಾತ್ಮಕವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿ ಭಾರೀ ಕೋಲಾಹಲವನ್ನೇ ಎಬ್ಬಿಸಿದೆ. ಇದೀಗ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್​ ಪಕ್ಷವೂ ತಿರುಗಿಬಿದ್ದಿದ್ದು, ಅವರ ನಿವಾಸದ ಬಳಿ ಆಕ್ರೋಶ ಹೊರಹಾಕಿದೆ.

'ಕಾಂಗ್ರೆಸ್ ಸರ್ಕಾರ ಇದ್ದಿದ್ದರೇ ಕಲ್ಲು ಹೊಡೆಯಬಹುದಾಗಿತ್ತು' ಎಂಬ ಹೇಳಿಕೆಯನ್ನು ಖಂಡಿಸಿ ಸೂರ್ಯ ಅವರ ನಿವಾಸದ ಬಳಿ ಶನಿವಾರ ಬೆಳಗ್ಗೆ ಪ್ರತಿಭಟನೆಗೆ ಮುಂದಾಗಿದ್ದ ಕೆಪಿಸಿಸಿ ವಕ್ತಾರ ಡಾ.ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಮತ್ತು ಕಾಂಗ್ರೆಸ್​ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ನಮ್ಮನ್ನ ದಾರಿ ನಡುವೆಯೇ ಪೊಲೀಸರು ಬಂಧಿಸಿ ಪ್ರತಿಭಟನೆಯನ್ನ ತಡೆದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು ಬೇಜವಾಬ್ದಾರಿಯುತ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಕದಡಲು ಪ್ರಚೋದಿಸಿರುವು ಎಷ್ಟು ಸರಿ? ಎಂದು ಪ್ರಶ್ನಿಸಿದ ಡಾ.ಶಂಕರ್ ಗುಹಾ ದ್ವಾರಕನಾಥ್, ಪೊಲೀಸರು ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡಲಿಲ್ಲ. ಇದು ಯಾವ ನ್ಯಾಯ? ಬೇಜವಾಬ್ದಾರಿಯುತ ಹೇಳಿಕೆ ಪ್ರಶ್ನಿಸುವ ಅಧಿಕಾರವೂ ನಮಗಿಲ್ಲವೇ? ಎಂದು ಆಕ್ರೋಶ ಹೊರಹಾಕಿದ್ದಾರೆ.

'ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ' ಎಂದಿದ್ದ ತೇಜಸ್ವಿ ಸೂರ್ಯ ಅವರು ಇಂದು ತನ್ನ ಮತ್ತು ಶಾಸಕ ರವಿ ಸುಬ್ರಮಣ್ಯ ಅವರ ಗೃಹ ಕಚೇರಿ ಮುಂದೆ ಪೊಲೀಸ್ ಸರ್ಪಗಾವಲು ಹಾಕಿಕೊಂಡು ರಕ್ಷಣೆ ಪಡೆದಿರುವುದು ಏಕೆ? ಇಷ್ಟೊಂದು ಭಯವೇ ನಿಮಗೆ? ನಿಮಗೆ ಮಾತ್ರ ರಕ್ಷಣೆ ಬೇಕು, ಜನ ಸಾಮಾನ್ಯರಿಗೆ ಮಾತ್ರ ರಕ್ಷಣೆ ಬೇಡವೇ? ಎಂದು ಹಿಗ್ಗಾಮುಗ್ಗಾ ತರಾಟೆಗೆಗೆ ತೆಗೆದುಕೊಂಡ ಡಾ.ಶಂಕರ್ ಗುಹಾ ದ್ವಾರಕನಾಥ್, ಓರ್ವ ಜನಪ್ರತಿನಿಧಿಯಾಗಿ ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು ಅನ್ನೋ ಸಾಮಾನ್ಯ ಜ್ಞಾನವೂ ನಿಮಗಿಲ್ವಾ? ಎಂದು ಗುಡುಗಿದ್ದಾರೆ.

ಇನ್ನೊಂದೆಡೆ ಬೆಂಗಳೂರಿನ ಗಿರಿನಗರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪೊಲೀಸರು ಪಡೆದಿದ್ದಾರೆ.