ಜಿಲ್ಲೆ

ನುಡಿದಂತೆ ನಡೆಯದ ಕಾಂಗ್ರೆಸ್ ಸರ್ಕಾರ

ವೀರೇಶ ಸೌದ್ರಿ

ಹಿರೇಕೆರೂರ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಬಿಜೆಪಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯ ನೆಪದಲ್ಲಿ ಇಂಧನ ಬೆಲೆ ಹೆಚ್ಚಿಸಿದೆ. ನುಡಿದಂತೆ ನಡೆದಿದ್ದೇವೆ ಎಂದು ಹೇಳುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇಂಧನ ಬೆಲೆ ಇಳಿಕೆ ಮಾಡುತ್ತೇವೆ ಎಂದು ಭರವಸೆ ನೀಡಿ, ಈಗ ಮಾತು ತಪ್ಪುತ್ತಿದ್ದಾರೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಮದ್ಯ, ಬಿತ್ತನೆ ಬೀಜಗಳು, ರಸಗೊಬ್ಬರ, ಮನೆ ಕಂದಾಯ ಹೀಗೆ ಎಲ್ಲದರ ಬೆಲೆಯನ್ನು ಹೆಚ್ಚಿಸುತ್ತ ಸಾಗಿದ್ದು, ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ ಮಾತನಾಡಿ, ಎಸ್‌ಟಿ ನಿಗಮದಲ್ಲಿ ಮೀಸಲಿಟ್ಟ ಹಣ ಲೂಟಿ, ಹಾಡುಹಗಲೇ ಗಲಾಟೆ, ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗತೊಡಗಿವೆ. ಸರ್ಕಾರದ ಬೊಕ್ಕಸದಲ್ಲಿ ಹಣ ಖಾಲಿಯಾಗಿದ್ದು, ರಾಜ್ಯ ದಿವಾಳಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಪಪಂ ಸದಸ್ಯರಾದ ಗುರುಶಾಂತ ಯತ್ತಿನಹಳ್ಳಿ, ಹರೀಶ್ ಕಲಾಲ, ದುರ್ಗೇಶ ತೀರಕಪ್ಪನವರ, ಪ್ರಕಾಶ್ ಗೌಡರ ಮಾತನಾಡಿದರು. ಶಿರಸ್ತೇದಾರ್ ಎಸ್.ಆರ್. ಆಪಿನಕೊಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ನಿಂಗಾಚಾರ ಮಾಯಾಚಾರ, ಮನೋಹರ್ ವಡ್ಡಿನಕಟ್ಟಿ, ಜಗದೀಶ್ ದೊಡ್ಡಗೌಡ್ರ, ಮದ್ವೀರಶೈವ ಸಮಾಜದ ಯುವ ಘಟಕದ ಅಧ್ಯಕ್ಷ ರುದ್ರೇಶ್ ಬೇತೂರ, ಹುಚ್ಚಣ್ಣ ಚೌಟಗಿ, ಎನ್.ಎಸ್. ಚಿಕ್ಕನರಗುಂದಮಠ, ಸಿ.ಬಿ. ಮಾಳಗಿ, ಉಮೇಶ್ ಬಣಕಾರ್, ಬಸವರಾಜ್ ಅರಕೇರಿ, ಶಂಕರನಾಯಕ್ ಲಮಾಣಿ, ರಾಜು ಕಾರಗಿ, ಹನುಮಂತಪ್ಪ ಕುರಬರ, ಗೋಪಾಲ ಲೆಕ್ಕಪ್ಪಳವರ್, ಬಸವರಾಜ ಚಿಂದಿ, ಈರಣ್ಣ ಚಿಟ್ಟೂರ, ಪ್ರಸನ್ನಕುಮಾರ ಜಾಡಬಂಡಿ ಇತರರು ಇದ್ದರು.