ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಸಂತೋಷ್ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪನೇ ಕಾರಣ. ಕೂಡಲೇ ಅವರನ್ನು ಬಂಧಿಸಬೇಕು, ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೇ ವೇಳೆ ಮಾತನಾಡಿದ ಡಿಕೆಶಿ, ಈ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿಯವರು ಸಂತೋಷ್ ಪ್ರಕರಣವನ್ನ ಮುಚ್ಚಿಹಾಕಲು ಪ್ರಯತ್ನ ಮಾಡ್ತಿದ್ದಾರೆ. ಸಿಎಂ ಮುತ್ತಿಗೆ ಹಾಕಲು ಹೊರಟಿದ್ವಿ, ಆದರೆ ನಮ್ಮನ್ನ ಮಧ್ಯದಲ್ಲೇ ಬಂಧಿಸಿದ್ರು, ನಾವು ಇಲ್ಲಿಗೆ ಬಂದಿದ್ದೇವೆ. ಸಿಎಂ ಅವರು ಭ್ರಷ್ಟಾಚಾರಿಗಳನ್ನ ರಕ್ಷಿಸುತ್ತಿದ್ದಾರೆ. ಇದನ್ನು ಖಂಡಿಸಿ 24 ಗಂಟೆ ಕಾಲ ಅಹೋರಾತ್ರಿ ಧರಣಿ ನಡೆಸುತ್ತೇವೆ. ನ್ಯಾಯಾಂಗದ ಎದುರು, ಶಾಸಕಾಂಗದ ಬಾಗಿಲಲ್ಲಿ ಕುಳಿತು ನ್ಯಾಯ ಕೇಳ್ತಿದ್ದೇವೆ ಎಂದರು.
ಸಂತೋಷ್ ಪಾಟೀಲ್ರ ಕುಟುಂಬಸ್ಥರು ಹೇಳಿದ್ದಾರೆ ಸಾವಿಗೆ ಕಾರಣ ಯಾರೆಂದು. ಇದೀಗ ಆ ಕುಟುಂಬಸ್ಥರಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡ್ತಿದ್ದಾರೆ. ಸಂತೋಷ್ ಪಾಟೀಲ್ ಬಿಜೆಪಿ ಪಕ್ಷದ ಕಾರ್ಯಕರ್ತ. ಆದರೆ ಆ ಪಕ್ಷವೇ ಅವನನ್ನು ಬಲಿ ಪಡೆದಿದೆ. ಇವನ ಸಾವಿಗೆ ನ್ಯಾಯ ಸಿಗಲೇಬೇಕು. ನಾವು ಇಂದು ರಾತ್ರಿ ಇಲ್ಲಿಯೇ ಮಲಗುತ್ತೇವೆ. ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲು ಬಿಡಲಿಲ್ಲ, ನಮ್ಮನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೊದ್ರು, ಬೇಲ್ ಮೇಲೆ ಬಂದಿದ್ದೇವೆ ಎಂದು ಡಿಕೆಶಿ ಹೇಳಿದರು.
ಸಿದ್ದರಾಮಯ್ಯ ಮಾತನಾಡಿ, ಸಂವಿಧಾನಕ್ಕೆ ಅಗೌರವ ತರುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡ್ತಿದೆ. 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರೇ ಹೇಳಿದ್ದಾರೆ. 40% ಕಮಿಷನ್ ಕೊಡಲು ಆಗದೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್ ಸಾವಿಗೆ ಈಶ್ವರಪ್ಪ ನೇರ ಕಾರಣ. ಈಶ್ವರಪ್ಪ ಒಬ್ಬ ಕೊಲೆಗಾರ. ಭ್ರಷ್ಟಾಚಾರದ ಗಂಗೋತ್ರಿ ಅಧ್ಯಕ್ಷ ಸಿಎಂ ಬಸವರಾಜ ಬೊಮ್ಮಾಯಿ. ಹೀಗಾಗಿಯೇ ಈಶ್ವರಪ್ಪನ ರಕ್ಷಣೆಗೆ ಸಿಎಂ ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.