ಬೆಂಗಳೂರು: ನನ್ನ ವಿರುದ್ಧ ಪ್ರಕರಣ ದಾಖಲಾಗಿ 5 ವರ್ಷ ಆಯಿತು. ಜೈಲಿಗೆ ಹೋಗಿ 3 ವರ್ಷ ಆಯಿತು. ಈಗ ನನಗೆ ನಿತ್ಯ ಪ್ರೇಮ ಪತ್ರಗಳು ಬರುತ್ತಿವೆ. ಚುನಾವಣೆ ಸಂದರ್ಭದಲ್ಲಿ ಒಂದು ವರ್ಷ ನನಗೆ ವಿರಾಮ ನೀಡಿ ನಂತರ ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪತ್ರ ಬರೆದಿದ್ದೇನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
'ನ್ಯಾಷನಲ್ ಹೆರಾಲ್ಡ್' ಪತ್ರಿಕೆ ಹೆಸರಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ವಿಚಾರಣೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ನಾಯಕರು ಗುರುವಾರ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ಇಡಿ ಬರಲಿ, ಐಟಿ ಬರಲಿ, ಸಿಬಿಐ ಬರಲಿ, ಬಿಜೆಪಿ ದಂಡೇ ಬರಲಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಮುಟ್ಟಲು ಸಾಧ್ಯವಿಲ್ಲ. ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ದೇಶಕ್ಕೆ ತ್ರಿವರ್ಣ ಧ್ವಜ ತಂದುಕೊಟ್ಟ, ರಾಷ್ಟ್ರಗೀತೆ ತಂದುಕೊಟ್ಟ, ದೇಶಕ್ಕೆ ಅಭಿವೃದ್ಧಿ ಕೊಟ್ಟ ಪಕ್ಷ ಎಂದರು.
ನನಗೆ ಇಡಿ, ತಿಹಾರ್ ಜೈಲು, ಐಟಿ, ಸಿಬಿಐನ ಸ್ವಲ್ಪ ಅನುಭವವಿದೆ. ನಾನು ರಾಹುಲ್ ಗಾಂಧಿ ಅವರಿಗೆ ಒಂದು ಸಣ್ಣ ಸಂದೇಶ ಕಳುಹಿಸಿದ್ದೆ. ಅವರು ನನಗೆ ಕರೆ ಮಾಡಿದರು. ಹೊಸ ರೋಗಿಯು ಹಳೆ ರೋಗಿಯ ಜತೆ ಮಾತನಾಡಬೇಕು ಎಂದು ಹೇಳಿದರು. ಆಗ ನಾವು ಕೆಲವು ವಿಚಾರಗಳನ್ನು ಹಂಚಿಕೊಂಡೆವು. ನಾನು ಹಾಗೂ ಸಿದ್ದರಾಮಯ್ಯನವರು ದೆಹಲಿಗೆ ಹೋದಾಗ ಇಡಿ ವಿಚಾರಣೆ ಹೇಗಿತ್ತು ಎಂದು ಕೇಳಿದೆ. ಅವರು ಯಾವುದೇ ರೀತಿಯಲ್ಲೂ ಮಾನಸಿಕವಾಗಿ ಕುಗ್ಗಿರಲಿಲ್ಲ ಎಂದು ಡಿಕೆಶಿ ಹೇಳಿದರು.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಹೆದರಿಸಿದರೆ, ಎಲ್ಲರೂ ಬಿಜೆಪಿಗೆ ಬರುತ್ತಾರೆ ಎಂದು ಭಾವಿಸಿದರೆ, ಇದು ಕೇವಲ ನಿಮ್ಮ ಭ್ರಮೆ. ನಾವೆಲ್ಲರೂ ಗಾಂಧಿ, ನೆಹರೂ, ಸರ್ದಾರ್ ಪಟೇಲ್, ಅಂಬೇಡ್ಕರ್, ಮೌಲಾನ ಅಜಾದ್ ಸೇರಿದಂತೆ ದೇಶಕ್ಕೆ ತ್ಯಾಗ ಮಾಡಿದವರ ಅನುಯಾಯಿಗಳು ಎಂದ ಡಿಕೆಶಿ, ಈ ದೇಶಕ್ಕೆ ಬಿಜೆಪಿಯವರು, ಮೋದಿ, ಅಮಿತ್ ಶಾ ಸ್ವಾತಂತ್ರ್ಯ ತಂದುಕೊಟ್ಟಿದ್ದರೇ? ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ: ಸಿದ್ದರಾಮಯ್ಯ ಮಾತನಾಡಿ, 97 ವರ್ಷಗಳ ಆರ್‌ಎಸ್‌ಎಸ್ ಇತಿಹಾಸದಲ್ಲಿ ಒಂದು ಮೇಲ್ಜಾತಿಯವರನ್ನು ಬಿಟ್ಟರೆ ಬೇರೆ ಯಾರಾದರೂ ಸರಸಂಘಚಾಲಕರಾಗಿದ್ದಾರ? ಹಿಂದುಳಿದ ಜಾತಿಯ, ಅಲ್ಪಸಂಖ್ಯಾತ, ದಲಿತರನ್ನು ಈ ಉನ್ನತ ಹುದ್ದೆಗಳಲ್ಲಿ ಕೂರಿಸಿದ್ದೀರ? ಎಲ್ಲಿದೆ ಸಬ್ ಕ ಸಾಥ್ ಸಬ್ ಕ ವಿಕಾಸ್? ಎಂದು ಪ್ರಶ್ನಿಸಿದರು.
ಬಿಜೆಪಿಯವರು ಜನರ ವಿಶ್ವಾಸ ದ್ರೋಹಿಗಳು. ಇಂಥವರು ದೇಶದ ಆಡಳಿತ ಚುಕ್ಕಾಣಿ ಹಿಡಿದು ಕೂತಿದ್ದಾರೆ. ನೆಹರು ಕುಟುಂಬ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ, ಆರ್‌ಎಸ್‌ಎಸ್ ಯಾವತ್ತಾದರೂ ಒಂದು ದಿನ ಸ್ವಾತಂತ್ರ್ಯ ಹೋರಾದಲ್ಲಿ ಭಾಗವಹಿಸಿದ ಉದಾಹರಣೆ ಇದೆಯಾ? ಸಾವರ್ಕರ್ ಒಬ್ಬ ಮಹಾನ್ ರಾಷ್ಟ್ರಭಕ್ತ ಎಂದು ಹೇಳುತ್ತಾರೆ, ಸಾವರ್ಕರ್ ಬ್ರಿಟೀಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಪರಿಪರಿಯಾಗಿ ಮನವಿ ಮಾಡಿದ್ದರು. ನರೇಂದ್ರ ಮೋದಿ ಅವರೇ ಇದು ನಿಮ್ಮ ಇತಿಹಾಸ. ಹೀಗಿರುವಾಗ ನಿಮಗೆ ನಾಚಿಕೆ, ಮಾನ ಮರ್ಯಾದಿ ಇದೆಯಾ? ಎಂದು ಪ್ರಶ್ನಿಸಿದರು.
ಮೋದಿ, ಶಾ ಯಾವ ಸಾಮ್ರಾಜ್ಯಶಾಹಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಪ್ರಜಾಪ್ರಭುತ್ವ ಧ್ವನಿ ಅಡಗಿಸುವ ಪ್ರಯತ್ನ ನಡೆದಿದೆ. ಸೋನಿಯಾ ಗಾಂಧಿ ವಿರುದ್ಧ ಕೇಸ್ ಹಾಕುವ ಮೂಲಕ ಧ್ವನಿ ಅಡಗಿಸುವ ಕೆಲಸ ನಡೆದಿದೆ ಎಂದು ವೀರಪ್ಪ ಮೊಯ್ಲಿ ಕಿಡಿಕಾರಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಕೃಷ್ಣಬೈರೇಗೌಡ, ಕುಣಿಗಲ್ ಶಾಸಕ ಡಾ.ರಂಗನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡೇ ಸೇರಿತ್ತು.