ಜಿಲ್ಲೆ

ಅಂತರ್ಜಲಮಟ್ಟದ ಸಮಗ್ರ ಅಧ್ಯಯನ

Avinash R

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಜಿಲ್ಲಾ ಜಲ ಬಜೆಟನ್ನು ಪರಿಷ್ಕರಿಸುವುದರ ಜತೆಗೆ ಮಣ್ಣು, ಜಲ ಸಂರಕ್ಷಣೆ ಮತ್ತು ಜಲಾನಯನ ಅಭಿವೃದ್ಧಿ ಚಟುವಟಿಕೆಗಳನ್ನು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಕೈಗೆತ್ತಿಕೊಳ್ಳುವ ಬಗ್ಗೆ ಹಸಿರು ಕೇರಳ ಮಿಷನ್‌ನ ಜಿಲ್ಲಾಮಟ್ಟದ ತಾಂತ್ರಿಕ ಸಮಿತಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ನೀರೊರತೆ ತಾಂತ್ರಿಕ ಸಮಿತಿಯ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಲ ಭದ್ರತಾ ಯೋಜನೆಯ ಪ್ರಕಾರ ಜಿಲ್ಲೆಯ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳು, ಕರಾವಳಿ ಪ್ರದೇಶವಿರುವ ಬ್ಲಾಕ್‌ಗಳಾದ ಕಾಸರಗೋಡು ಮತ್ತು ಮಂಜೇಶ್ವರದ ಅಂತರ್ಜಲಮಟ್ಟದ ಪರಿಸ್ಥಿತಿ ಕುರಿತು ವಿವರವಾದ ಅಧ್ಯಯನವನ್ನು ನಡೆಸಿ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.

ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯವನ್ನು ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ತೆರೆಯಲಾಗುವುದು. ಬ್ಲಾಕ್‌ಗಳಲ್ಲಿರುವ ಎಲ್ಲ ಜಲಾಶಯಗಳ ಸಮೀಕ್ಷೆ ನಡೆಸಿ ವಿವರವಾದ ವರದಿ ಸಿದ್ಧಪಡಿಸಲಾಗುವುದು. ಜಿಲ್ಲಾ ಪಂಚಾಯಿತಿ ಕಚೇರಿ ವಠಾರದ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ನವೀಕರಿಸಲಾಗುವುದು. ಶಾಲೆಗಳಲ್ಲಿ ಸ್ಥಾಪಿಸಿರುವ ಮಳೆನೀರಿನ ಟ್ಯಾಂಕ್‌ಗಳನ್ನು ಪುನರುಜ್ಜೀವನಗೊಳಿಸಿ ಬಳಕೆಯೋಗ್ಯವಾಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಸಂಘ ಸಂಸ್ಥೆಗಳಲ್ಲಿ ಮತ್ತು ಶಾಲೆಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಸಾರ್ವಜನಿಕ ಕೊಳಗಳು ಮತ್ತು ಬಾವಿಗಳನ್ನು ಸ್ವಚ್ಛಗೊಳಿಸಿ ಬಳಕೆಗೆ ಯೋಗ್ಯವಾಗುವಂತೆ ಮಾಡಲೂ ತೀರ್ಮಾನಿಸಲಾಯಿತು.

ಭೂಗರ್ಭ ಜಲ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಅರುಣ್‌ದಾಸ್, ಸಣ್ಣ ನೀರಾವರಿ ಕಾರ್ಯನಿರ್ವಾಹಕ ಎಂಜಿನಿಯರ್ ಲಾಲಿ ಜಾರ್ಜ್, ನೀರಾವರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಟಿ. ಸಜೀವ್, ಜಿಪಂ ಕಾರ್ಯನಿರ್ವಾಹಕ ಎಂಜಿನಿಯರ್ ಎನ್. ಶೈನಿ, ಉಪ ಯೋಜನಾಧಿಕಾರಿ ಎಚ್.ದ್ವಾರ, ಜಿಪಂ ಕಾರ್ಯದರ್ಶಿ ಎಸ್.ಶ್ಯಾಮಲಕ್ಷ್ಮೀ, ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಮೊದಲಾದವರು ಉಪಸ್ಥಿರಿದ್ದರು.