ಗುಳೇಗುಡ್ಡದ ಪಟ್ಟಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗುಳೇದಗುಡ್ಡ ತಾಲೂಕು ದರ್ಶನ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು. ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ತಾಲೂಕು ಹೋರಾಟ ಸಮಿತಿ ಕಾರ್ಯದರ್ಶಿ ಸಂಜಯ ಬರಗುಂಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಇತರರಿದ್ದರು. 
ಜಿಲ್ಲೆ

ಸಮಗ್ರ ದಾಖಲೆ ಹಿಡಿದಿಟ್ಟ ಕೃತಿ

Vijayapura - Desk - Gurappa Lokuri

ಗುಳೇದಗುಡ್ಡ: ಮುಂದಿನ ಪೀಳಿಗೆ ಹಿಂದಿನ ಇತಿಹಾಸವನ್ನು ಅರಿಯುವುದು ಅಗತ್ಯ. ಅಶೋಕ ಹೆಗಡೆ ಅವರು ಹೊರತಂದಿರುವ ಗುಳೇದಗುಡ್ಡ ತಾಲೂಕು ದರ್ಶನ ಕೃತಿಯಲ್ಲಿ ತಾಲೂಕು ರಚನೆ ಹೋರಾಟ ಸೇರಿ ಇತರ ವಿಷಯಗಳ ಬಗ್ಗೆ ದಾಖಲಿಸಿದ್ದು, ತಾಲೂಕಿನ ಎಲ್ಲ ಶಾಲೆ-ಕಾಲೇಜುಗಳಲ್ಲಿ ಈ ಕೃತಿ ದೊರೆಯುವಂತಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.

ಗುಳೇದಗುಡ್ಡ ಪಟ್ಟಣದ ಕರನಂದಿ ರಂಗಮಂದಿರದಲ್ಲಿ ಗುಳೇದಗುಡ್ಡ ತಾಲೂಕು ಹೋರಾಟ ಸಮಿತಿ ಭಾನುವಾರ ಆಯೋಜಿಸಿದ್ದ ಅಶೋಕ ಹೆಗಡೆ ರಚನೆಯ ಗುಳೇದಗುಡ್ಡ ತಾಲೂಕು ದರ್ಶನ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕಾಲಕ್ಕೆ ತಕ್ಕಂತೆ ನಮ್ಮ ವೃತ್ತಿ ಕೌಶಲವೂ ಬದಲಾಗಬೇಕು. ಇಂದು ಉದ್ದಿಮೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ದೊಡ್ಡ ಸವಾಲು. ಈ ನೆಲದ ನೇಕಾರಿಕೆ ಉಳಿದು ಬೆಳೆಯಬೇಕಾದರೆ ಕಾಲಕ್ಕೆ ತಕ್ಕಂತೆ ತಾಂತ್ರಿಕತೆ, ಕೌಶಲ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದರು.

ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುಳೇದಗುಡ್ಡಕ್ಕೆ ತನ್ನದೇ ಆದ ವಿಶೇಷತೆ ಇದೆ. ಪಟ್ಟಣದ ಧಾರ್ಮಿಕ, ಸಾಂಸ್ಕೃತಿಕ, ಭೌಗೋಳಿಕ, ಸ್ವಾತಂತ್ರೃ ಹೋರಾಟ, ಐತಿಹಾಸಿಕ ದಾಖಲೆಗಳನ್ನು ಒಳಗೊಂಡಿರುವ ಗುಳೇದಗುಡ್ಡ ತಾಲೂಕು ದರ್ಶನ ಕೃತಿಯನ್ನು ಪ್ರತಿಯೊಬ್ಬರೂ ಓದಬೇಕು ಎಂದರು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಗುಳೇದಗುಡ್ಡ ತಾಲೂಕು ರಚನೆಗಾಗಿ ಸಾಕಷ್ಟು ಹೋರಾಟಗಳು ನಡೆದವು. ಅದರ ಲವಾಗಿ ಈಗ ಗುಳೇದಗುಡ್ಡ ತಾಲೂಕು ರಚನೆಯಾಗಿದೆ. ಆದರೆ, ಕೇವಲ ಗುಳೇದಗುಡ್ಡ ಹೋಬಳಿಯನ್ನು ಮಾತ್ರ ತಾಲೂಕು ಮಾಡಲಾಗಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಗುಳೇದಗುಡ್ಡವನ್ನು ಪೂರ್ಣ ಪ್ರಮಾಣದ ತಾಲೂಕನ್ನಾಗಿ ಮಾಡಬೇಕು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಸಿದ್ಧಲಿಂಗಪ್ಪ ಬರಗುಂಡಿ ಮಾತನಾಡಿ, ಅಶೋಕ ಹೆಗಡೆ ಅವರ ಈ ಪುಸ್ತಕ ಬಹಳಷ್ಟು ವಿಶೇಷ ಹೊಂದಿದೆ. ಮುಂದಿನ ತಲೆಮಾರಿನ ಯುವ ಪೀಳಿಗೆಗೆ ಈ ತಾಲೂಕು ದರ್ಶನ ಪುಸ್ತಕ ಒಂದು ಮಾರ್ಗದರ್ಶನ ಕೃತಿಯಾಗಿ ಉಳಿಯಲಿದೆ ಎಂದರು.

ಶ್ರೀ ಗುರುಸಿದ್ಧೇಶ್ವರ ಮಠದ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಲೇಖಕ ಅಶೋಕ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ತಾಲೂಕು ಹೋರಾಟ ಸಮಿತಿ ಕಾರ್ಯದರ್ಶಿ ಸಂಜಯ ಬರಗುಂಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಕಸಾಪ ತಾಲೂಕು ಅಧ್ಯಕ್ಷ ಘಂಟಿ ಇತರರಿದ್ದರು. ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಶ್ರೀಕಾಂತ ಹುನಗುಂದ ವಂದಿಸಿದರು.