ಜಿಲ್ಲೆ

ಸಮಗ್ರ ಮೀನುಗಾರಿಕಾ ನೀತಿ ಅವಶ್ಯ ಮೀನುಗಾರ ಮಹಿಳೆಯರ ಸಮಾವೇಶ ಉದ್ಘಾಟಿಸಿ ಯು.ಟಿ.ಖಾದರ್ ಹೇಳಿಕೆ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರಿಗೆ ಪೂರಕವಾದ ಸಮಗ್ರ ಮೀನುಗಾರಿಕಾ ನೀತಿ ರೂಪಿಸುವ ಅಗತ್ಯವಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ನಡೆದ ಮಂಗಳೂರು ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿ ಸ್ಟೇಟ್‌ಬ್ಯಾಂಕ್ ಇದರ 25ನೇ ವರ್ಷದ ಅಂಗವಾಗಿ ಮೀನುಗಾರ ಮಹಿಳೆಯರ ಸಮಾವೇಶ ಉದ್ಘಾಟಿಸಿ, ಅವರು ಮಾತನಾಡಿದರು.

ಕೋಟೆಪುರದಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ 5 ಕೋಟಿ ರೂ. ಬಿಡುಗಡೆಗೊಂಡಿದೆ. ಕ್ರಮೇಣ ಬಂದರು ಆಗಿ ಪರಿವರ್ತನೆಯಾಗುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ಗಮನಕ್ಕೆ ತಂದರೆ ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಮಹಿಳಾ ಸಬಲೀಕರಣಕ್ಕೆ ಪ್ರೇರಣೆ: ಮೀನುಗಾರ ಮಹಿಳೆಯರು ಜಗತ್ತಿಗೆ ಸ್ವಾಭಿಮಾನದ ಪಾಠವನ್ನು ಬೋಧಿಸಿದವರು. ಮಹಿಳಾ ಸಬಲೀಕರಣಕ್ಕೆ ಪ್ರೇರಣೆ ನೀಡಿದವರು. ರೈತರು ಮತ್ತು ಮೀನುಗಾರರು ಅನ್ನದಾತರು. ಹಾಗಾಗಿ ಅವರಿಗೆ ವಿಶೇಷ ಗೌರವ ಸಲ್ಲುತ್ತದೆ. ಮೀನುಗಾರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಡೆಗೆ ಹೆಚ್ಚು ಆಸಕ್ತರಾಗಬೇಕು. ಶಿಕ್ಷಣದಿಂದ ಬಡತನ ನಿರ್ಮೂಲನೆ ಸಾಧ್ಯ ಎಂದವರು ಹೇಳಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿದ್ದರು. ಗಡಿಯಲ್ಲಿರುವ ಸೈನಿಕರಂತೆ ಸಮುದ್ರದಲ್ಲಿ ಮೀನುಗಾರರು ಕಾಯುತ್ತಾರೆ. ಹಾಗಾಗಿ ಮೀನುಗಾರರು ದೇಶಭಕ್ತ ಸಮುದಾಯವಾಗಿದೆ. ಮೀನುಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸದಾ ಸ್ಪಂದಿಸಲು ಬದ್ಧ ಎಂದವರು ಹೇಳಿದರು.

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸ್ಟೇಟ್‌ಬ್ಯಾಂಕ್‌ನಲ್ಲಿ ಮೀನುಗಾರ ಮಹಿಳೆಯರಲ್ಲಿ ಯಾವುದೇ ಗೊಂದಲ ಇಲ್ಲದಿದ್ದರೆ ಬೇಕಾದ ರೀತಿಯಲ್ಲಿ ಮಾರುಕಟ್ಟೆಯನ್ನು ವ್ಯವಸ್ಥೆ ಮಾಡಿ ಕೊಡಲಾಗುವುದು ಎಂದರು.

ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಅತಿಥಿಯಾಗಿದ್ದರು. ಕೇಂದ್ರ ಸರ್ಕಾರವು ಮೀನುಗಾರಿಕೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದರ ಪ್ರಯೋಜನ ಪಡೆಯಬೇಕು ಎಂದರು.

ಸ್ಟೇಟ್‌ಬ್ಯಾಂಕ್ ಮಾರುಕಟ್ಟೆ ಉಳಿಸಲು ಹೋರಾಟ ಮಾಡಿದ ಹಿರಿಯ ಮೀನು ಮಾರಾಟಗಾರ ಮಹಿಳೆಯರಾದ ಕುಸಮಾ ಅಮೀನ್ ಬೆಂಗ್ರೆ, ಗೌರಿ ಖಾರ್ವಿ, ಶೋಭಾ ಕರ್ಕೇರ ಬೆಂಗ್ರೆ, ಲೀಲಾವತಿ ಅಮೀನ್ ಉಳ್ಳಾಲ, ಪ್ರೇಮಾ ಸಾಲ್ಯಾನ್ ಬೆಂಗ್ರೆ, ಸರಸ್ವತಿ ಸಾಲ್ಯಾನ್ ಉಳ್ಳಾಲ, ರೋಹಿಣಿ ಕರ್ಕೇರ ಉಳ್ಳಾಲ, ರಾಧಾ ಮೋಹಿನಿ ಬೆಂಗ್ರೆ, ಟೆಂಪೋ ಚಾಲಕರಾದ ಸೀತಾರಾಮ ಶೆಟ್ಟಿ ಹಾಗೂ ಅನ್ವರ್ ಕುದ್ರೋಳಿ ಅವರನ್ನು ಸನ್ಮಾನಿಸಲಾಯಿತು.

ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷೆ ಜಯ ಸಿ.ಕೋಟ್ಯಾನ್, ಉಪಾಧ್ಯಕ್ಷ ಮೋಹನ ಬೆಂಗ್ರೆ, ಮಂಗಳೂರು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಮನಪಾ ನಿಕಟಪೂರ್ವ ಮೇಯರ್ ಮನೋಜ್ ಕುಮಾರ್, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕಿ ವಾಣಿ ಜಿ.ಸಾಲಿಯಾನ್, ಟ್ರಾಲ್‌ಬೋಟ್ ಯೂನಿಯನ್ ಅಧ್ಯಕ್ಷ ಚೇತನ್ ಬೆಂಗ್ರೆ, ಉದ್ಯಮಿ ಗಣೇಶ್ ಶೆಟ್ಟಿ, ಸ್ಟೇಟ್‌ಬ್ಯಾಂಕ್ ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿಯ ಅಧ್ಯಕ್ಷೆ ಬೇಬಿ ಎಸ್.ಕುಂದರ್, ಬೋಳೂರು ಗ್ರಾಮಸಭಾದ ಮುಖಂಡ ಯಶವಂತ ಮೆಂಡನ್ ಮೊದಲಾದವರಿದ್ದರು.

ಪ್ರವೀಣ್ ಕುಂಪಲ ಸ್ವಾಗತಿಸಿದರು. ತೃಪ್ತಿ ಸುವರ್ಣ ಪ್ರಸ್ತಾವನೆಗೈದರು.