ರಬಕವಿ/ಬನಹಟ್ಟಿ: ಹನ್ನೊಂದು ಕಥೆಗಳನ್ನು ಹೊಂದಿರುವ ಪಾದಗಟ್ಟೆ ಕಥಾ ಸಂಕಲನ ಬನಹಟ್ಟಿಯ ಪರಿಸರ, ನೇಕಾರಿಕೆ ಉದ್ಯೋಗ, ನೇಕಾರನ ಬದುಕು-ಬವಣೆ ಮೇಲೆ ಬೆಳಕು ಚೆಲ್ಲಿದೆ ಎಂದು ಮಹಾಲಿಂಗಪುರದ ಹಿರಿಯ ಸಾಹಿತಿ ಗುರುರಾಜ ಖಾಸನೀಸ್ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ತಾಲೂಕು ಘಟಕದ ಆಶ್ರಯದಲ್ಲಿ ಬಸವನಗರದ ಶಿವಜಾತ ಉಮದಿ ಅವರ ನಿವಾಸದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-9 ಕಾರ್ಯಕ್ರಮದಲ್ಲಿ ಬನಹಟ್ಟಿಯ ಯುವ ಕಥೆಗಾರ ಆನಂದ ಕುಂಚನೂರ ಅವರ ಪಾದಗಟ್ಟೆ ಕಥಾ ಸಂಕಲನ ಕುರಿತು ಮಾತನಾಡಿದ ಅವರು, ಪಾದಗಟ್ಟೆ ಕೃತಿ ಅನೇಕ ಅಂಶಗಳನ್ನು ಪರಿಚಯಿಸುವ ಜೊತೆಗೆ ಅದರಲ್ಲಿರುವ ಕಥೆಗಳಲ್ಲಿನ ಪಾತ್ರಗಳು ಸ್ವಗತವಾಗಿ ಹೋಗುತ್ತವೆ. ಕಥೆಗಳು ಓದಿಸಿಕೊಂಡು ಹೋಗುತ್ತವೆ. ಬನಹಟ್ಟಿಯ ಯುವ ಕಥೆಗಾರ ಆನಂದ ಕುಂಚನೂರ ಕಥಾಲೋಕದ ಗಮನಾರ್ಹ ಮತ್ತು ವಿಶಿಷ್ಟ ಕಥೆಗಾರರಾಗಿ ಹೊರಹೊಮ್ಮಿದ್ದಾರೆ. ಆನಂದ ಕುಂಚನೂರ ಒಬ್ಬ ಪ್ರತಿಭಾವಂತ ಕಥೆಗಾರ, ಕವಿಯೂ ಆಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಅವರ ಕಾವ್ಯ-ಕಥೆಗಳು ನಾಡಿನ ತುಂಬ ಸಾಹಿತ್ಯಲೋಕ ಗುರುತಿಸುವಂತೆ ಮಾಡುವುದು ಅವಶ್ಯವಿದೆ ಎಂದರು.
ನಂತರ ನಡೆದ ಸಂವಾದದಲ್ಲಿ ಹಿರಿಯ ಸಾಹಿತಿ ಜಿ. ಎಸ್. ವಡಗಾಂವಿ ಮಾತನಾಡಿ, ಆನಂದ ಕುಂಚನೂರ ಅವರು ತಾವು ಹೇಳಬೇಕಾದುದನ್ನು ಪ್ರತಿಮೆಗಳ ಮೂಲಕ ಕೆಲವೇ ಶಬ್ದಗಳಲ್ಲಿ ಹೇಳಿ ಕಥೆಗೆ ಹೆಚ್ಚಿನ ಧ್ವನಿ ಬರುವಂತೆ ತಂತ್ರ ಬಳಸಿದ್ದಾರೆ ಎಂದರು.
ಸಾಹಿತಿ ಡಾ. ಡಿ.ಎ.ಬಾಗಲಕೋಟ ಮಾತನಾಡಿ, ಕುಂಚನೂರ ಅವರು ಕಥೆಯನ್ನು ಹೆಣೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರು ಭವಿಷ್ಯದಲ್ಲಿ ಅದ್ಭುತ ಕಥೆಗಾರರಾಗಿ ಹೊರಹೊಮ್ಮಲಿದ್ದಾರೆ ಎಂದರು. ಖ್ಯಾತ ಚಿತ್ರಕಲಾವಿದ ಮಹಾದೇವ ಕವಿಶೆಟ್ಟಿ ಮಾತನಾಡಿದರು.
ರಬಕವಿ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶಿವಜಾತ ಉಮದಿ ಅಧ್ಯಕ್ಷತೆ ವಹಿಸಿ, ಕಸಾಪ ಕಾರ್ಯಚಟುವಟಿಕೆ ನಮ್ಮ ತಾಲೂಕಿನಲ್ಲಿ ಕ್ರಿಯಾಶೀಲವಾಗಿ ನಡೆದಿವೆ. ನಮ್ಮ ಸಹಾಯ, ಸಹಕಾರ ಸದಾಕಾಲ ಇದೆ. ಸಾಹಿತ್ಯಕ ಕಾರ್ಯಕ್ರಮಗಳು ಮನೆ ಮನೆಗೆ ತಲುಪುವಂತೆ, ಮನಸ್ಸಿಗೆ ಮುಟ್ಟುವಂತೆ ಮಾಡುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಕಸಾಪ ತಾಲೂಕು ಮಹಿಳಾ ಪ್ರತಿನಿಧಿ ಸರ್ವಮಂಗಳಾ ಹಿರೇಮಠ, ದಾಕ್ಷಾಯಣಿ ಉಮದಿ, ಉದಯ ಜಿಗಜಿನ್ನಿ, ತೇರದಾಳದ ಸಾಹಿತಿ ಎಸ್.ಆರ್.ರಾವಳ, ಕಪ್ಪಲಗುದ್ದಿ ಸಂಗೀತ ಶಿಕ್ಷಕ ಕುಮಾರ ಬಡಿಗೇರ, ಮಂಜುಳಾ ಕರಡಿಗುಡ್ಡಿ, ಶಾಂತಾ ದಾಶಾಳ, ಮಹಾದೇವ ಹೆರಕಲ್ಲ, ಮಹಾಲಿಂಗ ತೆಳಗಿನಮನಿ, ರಾಜೇಶ್ವರಿ ಉಮದಿ, ಕಸಾಪ ತಾಲೂಕ ಅಧ್ಯಕ್ಷ ಮ.ಕೃ.ಮೇಗಾಡಿ, ಮೃತ್ಯುಂಜಯ ರಾಮದುರ್ಗ, ಸಾಹಿತಿ ಶಿವಾನಂದ ದಾಶಾಳ ಇದ್ದರು.