ಜಿಲ್ಲೆ

ಸರ್ಕಾರಿ ಮಹಿಳಾ ಹಾಸ್ಟೆಲ್‌ನ ಊಟದಲ್ಲಿ ಜಿರಳೆ ಪತ್ತೆ

ವಿಡಿಯೋ ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಪ ಲೋಕಾಯಕ್ತ ನ್ಯಾ.ಬಿ.ವೀರಪ್ಪ

ಚಿಂತಾಮಣಿ: ನಗರದ ಹಲವು ಸರ್ಕಾರಿ ಹಾಸ್ಟೆಲ್‌ಗಳಿಗೆ ಶನಿವಾರ ರಾತ್ರಿ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರಿಗೆ ಮಹಿಳಾ ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಹಾಸ್ಟೆಲ್ ಅವ್ಯವಸ್ಥೆ ಕುರಿತಂತೆ ದೂರಿನ ಸುರಿಮಳೆಗೈದರು.
ವಿದ್ಯಾರ್ಥಿನಿಯರ ದೂರುಗಳನ್ನು ಆಲಿಸಿದ ಉಪಲೋಕಾಯುಕ್ತರು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ತೇಜಾನಂದರೆಡ್ಡಿ ಸೇರಿ ಸ್ಥಳೀಯ ಅಧಿಕಾರಿಗಳು ಮತ್ತು ವಾರ್ಡನ್ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಡಾ.ಬಿ.ಅರ್.ಅಂಬೇಡ್ಕರ್ ಸರ್ಕಾರಿ ಬಾಲಕರ ಎರಡು ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳು ಉತ್ತಮ ಪ್ರತಿಕ್ರಿಯೆ ನೀಡಿದರು. ಹಾಸ್ಟೆಲ್ ಅಡುಗೆ ಶುಚಿತ್ವ ಕಂಡು ಉಪ ಲೋಕಾಯುಕ್ತರು ಸಮಾಧಾನಗೊಂಡಿದ್ದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವರ್ಗೀಕೃತ ಬಾಲಕಿಯರ ವಿದ್ಯಾರ್ಥಿನಿಲಯ ಮತ್ತು ಅದೇ ಅವರಣದಲ್ಲಿರುವ ಡಾ ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಪದವಿ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಅವ್ಯಸ್ಥೆ ಕಂಡು ವಾರ್ಡನ್ ಸುವರ್ಣ ಪಾಟೀಲ್ ಅವರ ಕಾರ್ಯವೈಖರಿಗೆ ರೇಗಿದರು.
ವಿದ್ಯಾರ್ಥಿನಿಯರ ಹಾಸ್ಟೆಲ್‌ನ ಗೋಡೆಗಳಲ್ಲಿ ಐ ಲವ್ ಯೂ, ಲವ್ ವಿತ್ ಮೀ ಸೇರಿ ಹಲವು ಗೋಡೆ ಬರಹ ಮತ್ತು ಚಿತ್ರಗಳನ್ನು ಕಂಡು, ‘ನಿಮ್ಮ ಮನೆಯ ಗೋಡೆಗಳ ಮೇಲೆ ಇದೇ ರೀತಿ ಬರೆದು ಕೊಳ್ಳುತ್ತೀರಾ?, ನಾಳೆಯೊಳಗೆ ಸಂಪೂರ್ಣ ಗೋಡೆ ಬರಹಗಳನ್ನು ಅಳಿಸಿರಬೇಕು ಎಂದು ವಿದ್ಯಾರ್ಥಿನಿಯರಿಗೆ ಮತ್ತು ವಾರ್ಡನ್‌ಗೆ ತಾಕೀತು ಮಾಡಿದರು.
ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ವೀರೇಂದ್ರ ಕುಮಾರ್, ಸಿಬ್ಬಂದಿಯಾದ ಗುರು, ಸಂತೋಷ್, ಚೌಡರೆಡ್ಡಿ, ಸತೀಶ್, ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಮುರಳೀಧರ್ ಇತರರು ಇದ್ದರು.


ವಿದ್ಯಾರ್ಥಿನಿಯರಿಗೆ ತಿಂಗಳ ಕಿಟ್ ಇಲ್ಲ
ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ ಮಾಡದೆ ಇರುವುದು, ಕುಡಿಯುವ ನೀರಿನ ಸಮಸ್ಯೆ, ಹೆಣ್ಣು ಮಕ್ಕಳಿಗೆ ತಿಂಗಳಿಗೆ ನೀಡುವ ಕಿಟ್‌ಗಳನ್ನು ಸರಿಯಾಗಿ ನೀಡದೆ ಇರುವುದು, ಸ್ನಾನಕ್ಕೆ ಬೇಕಾದ ಸೋಪು ಮತ್ತಿತರ ವಸ್ತುಗಳನ್ನು ನೀಡದೆ ಇರುವ ಬಗ್ಗೆ ವಿದ್ಯಾರ್ಥಿಗಳು ದೂರುಗಳ ಸುರಿಮಳೆ ಗೈದರು.
ವಿದ್ಯಾರ್ಥಿನಿಯೊಬ್ಬರು ಬಡಿಸಿದ ಊಟದಲ್ಲಿ ಜಿರಳೆ ಬಿದ್ದಿರುವುದನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿರುವುದನ್ನು ಉಪ ಲೋಕಾಯುಕ್ತರಿಗೆ ತೋರಿಸುತ್ತಿದ್ದಂತೆ ಸಿಟ್ಟಿಗೆದ್ದ ಅವರು, ‘ನಿಮ್ಮ ಮಕ್ಕಳಿಗೆ ಮನೆಯಲ್ಲಿ ಇದೇ ರೀತಿಯ ಅಡುಗೆ ಮಾಡಿ ಊಟ ಬಡಿಸ್ತೀರಾ’ ಎಂದು ಕಿಡಿಕಾರಿದರು.
ಬಾಲಕಿಯರ ಹಾಸ್ಟೆಲ್‌ನಲ್ಲಿನ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳಿಗೆ ಸೂಚಿಸಿದ ಬಿ.ವೀರಪ್ಪ ಅವರು, ಮುಂದಿನ ದಿನಗಳಲ್ಲಿ ಭೇಟಿ ನೀಡಿ ಮರು ಪರಿಶೀಲನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.