ದೇವನಹಳ್ಳಿ: ಹಾವು ಎಂದಾಕ್ಷಣ ಬೆಚ್ಚಿಬೀಳೋ ಜನರೇ ಹೆಚ್ಚು. ಇನ್ನು ಜೀವಂತ ಹಾವನ್ನ ಕಂಡರೆ ಮೈಲಿದೂರ ಓಡಿಹೋಗ್ತಾರೆ. ಅಂತಹದ್ದರಲ್ಲಿ ಇಲ್ಲೊಬ್ಬ ಭೂಪ ಜೀವಂತ ನಾಗರಹಾವನ್ನೇ ಕೈಯಲ್ಲಿ ಹಿಡಿದು ಊರೆಲ್ಲಾ ಸುತ್ತಾಡಿದ್ದಾನೆ. ಅಷ್ಟೇ ಅಲ್ಲ, ಬೇಕರಿ ಬಳಿ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಟೀ ಕುಡಿಯುತ್ತಾ ಪೋಸ್ ಕೊಟ್ಟು ಸಾರ್ವಜನಿಕರಲ್ಲೂ ಆತಂಕ ಹುಟ್ಟಿಸಿದ್ದಾನೆ. ಇತಂಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ನಡೆದಿದ್ದು, ಹಾವು ಹಿಡಿದುಕೊಂಡು ಹುಚ್ಚಾಟ ಮೆರೆಯುತ್ತಿದ್ದ ದೃಶ್ಯ ವೈರಲ್ ಆಗಿದೆ.
ಇತ್ತೀಚೀಗೆ ಬೂದಿಗೆರೆ ಗ್ರಾಮದ ಮನೆಯೊಂದಕ್ಕೆ ನಾಗರಹಾವು ನುಗ್ಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬ ಹಾವನ್ನು ಹಿಡಿದುಕೊಂಡು ಊರೆಲ್ಲ ಸುತ್ತಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದಾನೆ. ಬಳಿಕ ಗ್ರಾಮದ ಬೇಕರಿ ಬಳಿ ನಿಂತು ಕೈಯಲ್ಲಿ ಹಾವನ್ನು ಹಿಡಿದುಕೊಂಡೇ ಟೀ ಕುಡಿಯುತ್ತಾ ಹುಚ್ಚಾಟ ಮೆರೆದಿದ್ದಾನೆ.
ಇವನ ವರ್ತನೆ ಕಂಡು ಸಿಟ್ಟಾದ ಗ್ರಾಮಸ್ಥರು ಬುದ್ಧಿವಾದ ಹೇಳಿ ಹಾವನ್ನು ಗ್ರಾಮದ ಹೊರವಲಯದ ಕಾಡಿಗೆ ಬಿಡಿಸಿದ್ದಾರೆ. ಇನ್ನೂ ಹಾವನ್ನು ಕುತ್ತಿಗೆಗೆ ಸುತ್ತಿಸಿಕೊಂಡು ಟೀ ಕುಡಿಯುತ್ತಾ ದೇವರಂತೆ ಓಡಾಡಿದ್ದ ಆ ವಯ್ಕತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.