ಜಿಲ್ಲೆ

ಮಳೆ ನೀರಿನೊಂದಿಗೆ ಮನೆಗೆ ನುಗ್ಗಿದ ನಾಗರಹಾವು


ಭಟ್ಕಳ: ಮಳೆ ಒಂದೇ ಸಮನೆ ಸುರಿಯುತ್ತಿದ್ದು ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಕೊಳಚೆ ನೀರು ಮನೆಗೆ ನುಗ್ಗುತ್ತಿದೆ. ನೀರಿನ ಜತೆಗೆ ವಿಷ ಜಂತುಗಳು ಮನಗೆ ನುಗ್ಗುತ್ತಿರುವುದು ನಾಗರಿಕರ ನಿದ್ದೆಗೆಡಿಸಿದೆ.

ಪಟ್ಟಣದ ಪುರಸಭೆ ವಾರ್ಡ್ ನಂ. 22ರಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಸಣ್ಣ ಮಳೆಗೂ ರಸ್ತೆಮೇಲೆ ಕೃತಕ ಕೆರೆ ನಿರ್ಮಾಣವಾಗುತ್ತದೆ. ಸಣ್ಣ ಮಳೆ ಸುರಿದರೂ ಮನೆಯೊಳಗೆ ನೀರು ನುಗ್ಗುತ್ತಿದೆ.

ಸ್ಥಳೀಯ ನಿವಾಸಿ ವಾಸುದೇವ ನಾಯಕ ಅವರ ಮನೆಗೆ ಸುಮಾರು 7ರಿಂದ 8 ಅಡಿ ಉದ್ದದ ನಾಗರ ಹಾವೊಂದು ನುಗ್ಗಿದ್ದು ಅವರ ಮನೆಯ ಎದುರಿನ ಅಂಗಡಿಯ ಶೆಟರ್‌ಗೆ ಸುತ್ತಿಕೊಂಡು ಮನೆಯವರಲ್ಲಿ ಭಯ ಹುಟ್ಟಿಸಿತ್ತು. ಕೂಡಲೆ ಶಿರಾಲಿಯಿಂದ ಹಾವು ಹಿಡಿಸುವವರನ್ನು ಕರೆದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

ಕರೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ

ಸ್ಥಳೀಯ ಆಡಳಿತಕ್ಕೆ ದೂರು ಕೊಟ್ಟು ಬೇಸತ್ತ ಜನರು ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರೀಯಾ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಪಂದಿಸಿದ ಅವರು ಸ್ಥಳಕ್ಕೆ ಪುರಸಭೆ ಅಧಿಕಾರಿಗಳನ್ನು ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರೂ ಕೂಡ ಸಾರ್ವಜನಿಕರ ಕರೆಗೆ ತಕ್ಷಣ ಕಾರ್ಯಪ್ರವರ್ತರಾಗಿದ್ದು ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ.