ಜಿಲ್ಲೆ

ಅಕ್ಟೋಬರ್​ನಲ್ಲಿ ನೂತನ ವೇತನ ಆಯೋಗ ರಚನೆ: ಸಿಎಂ ಘೋಷಣೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ. ಅಕ್ಟೋಬರ್​ನಲ್ಲಿ ನೂತನ ವೇತನ ಆಯೋಗ ರಚಿಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಿಸಿದರು.

ವಿಧಾನಸೌಧ ಬ್ಯಾಂಕ್ವೆಟ್ ಹಾಲ್​ನಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನ ಉದ್ಘಾಟಿಸಿದ ಬಳಿಕ ಸರ್ವೋತ್ತಮ ಸೇವಾ‌ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ, ವೇತನ ಪರಿಷ್ಕರಣೆಗೆ ಸಂಬಂಧಿಸಿದ ಶಿಫಾರಸು ಹಾಗೂ ವರದಿ ಸಲ್ಲಿಸಲು ಈ ಆಯೋಗ ರಚಿಸಲಿದ್ದು, ನೌಕರರ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.

ಆರ್ಥಿಕತೆ ಬಲದ ಆಧಾರದ ಮೇಲೆ ಅಭಿವೃದ್ಧಿ, ‌ಜನರ‌ ಆಶೋತ್ತರಗಳಿಗೆ ಸ್ಪಂದನೆ ಜತೆಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಶಕ್ತವಾಗಲಿ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಸಹಭಾಗಿತ್ವ ಮುಖ್ಯ: ಪ್ರಧಾನಿ ನರೇಂದ್ರ ಮೋದಿ ಅವರು 2025ರ ವೇಳೆಗೆ ಭಾರತ ಐದು ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಗುರಿ ಇಟ್ಟುಕೊಂಡಿದೆ,‌ ಇದರಲ್ಲಿ ಒಂದು ಟ್ರಿಲಿಯನ್ ಕರ್ನಾಟಕದ ಪಾಲು ಇರಬೇಕು ಎನ್ನುವ ರಾಜ್ಯ ಸರ್ಕಾರದ ಸಂಕಲ್ಪಕ್ಕೆ ಸರ್ಕಾರಿ ನೌಕರರ ಸಹಭಾಗಿತ್ವ ಕೂಡ ಮುಖ್ಯ ಎಂದರು.

ಪುಣ್ಯಕೋಟಿಗೆ ಕೈಜೋಡಿಸಿ: ಗೋವು ಸಂಪತ್ತು ಉಳಿಸಿ ಬೆಳೆಸುವ ಉದ್ದೇಶದಿಂದ ಹಸುಗಳನ್ನು ದತ್ತು ಸ್ವೀಕರಿಸುವ ಪುಣ್ಯಕೋಟಿ ಯೋಜನೆಗೆ‌ ಕೈಜೋಡಿಸಬೇಕು. ಇದು ಒತ್ತಾಯವಲ್ಲ, ನನ್ನ ಮನವಿ ಎಂದು ಸಿಎಂ ಹೇಳಿದರು.

ಒಂದು ಹಸು ದತ್ತು ಪಡೆಯಲು ವಾರ್ಷಿಕ 11,000 ರೂ. ಶುಲ್ಕ ನಿಗದಿಪಡಿಸಿದ್ದು, ನಾನು 100 ಗೋವುಗಳನ್ನು ದತ್ತು ಸ್ವೀಕರಿಸಲು ನಿರ್ಧರಿಸಿರುವೆ. ಅದೇ ರೀತಿ ಸಚಿವರು, ಸಂಸದರು, ಶಾಸಕರು ಸೇರಿ‌ ಜ‌ನಪ್ರತಿನಿಧಿಗಳು ಈ ಯೋಜನೆಗೆ ಸಹಕರಿಸಬೇಕು. ಸರ್ಕಾರಿ ನೌಕರರು ಗೋವು ದತ್ತು ಪಡೆಯುವುದು ಪುಣ್ಯದ ಕೆಲಸವೆಂದು ಭಾವಿಸಬೇಕು ಎಂದು ಸಿಎಂ ಸಲಹೆ ನೀಡಿದರು.

ಸಚಿವರಾದ ಆರ್.ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಇನ್ನಿತರರು ಇದ್ದರು.