ಪರಶುರಾಮ ಭಾಸಗಿ ವಿಜಯಪುರ
ನಿಮ್ಮ ಹಣಕ್ಕೆ ಹೆಚ್ಚಿನ ಲಾಭಾಂಶ ಬೇಕೆ? ನಮ್ಮಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ನೀಡುತ್ತೇವೆ….ನಮ್ಮದು ನೋಂದಾಯಿತ ಕಂಪನಿ, ಅಮೇರಿಕದಲ್ಲಿ ಕೇಂದ್ರ ಸ್ಥಾನವಿದ್ದು ಜಗತ್ತಿನ ನಾನಾ ಭಾಗಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಯಾವುದೇ ಮೋಸ, ವಂಚನೆ ಇಲ್ಲದೇ ಆಕರ್ಷಕ ಲಾಭಾಂಶ ನಿಮ್ಮದಾಗಿಸಿಕೊಳ್ಳಿ…!
ಇಂಥ ಸಂದೇಶಗಳು ನಿಮಗೂ ಬರುತ್ತಿವೆಯೇ? ಹಾಗಾದರೆ ಹುಷಾರ್…!!! ಇಂಥದ್ದೇ ಸಂದೇಶ ನಂಬಿ ಪ್ರತಿಷ್ಠಿತ ಬಟ್ಟೆ ವ್ಯಾಪಾರಿಯೊಬ್ಬರು ಒಂದಲ್ಲ ಎರಡಲ್ಲ ಬರೋಬ್ಬರಿ 59,12,765 ರೂಪಾಯಿ ಕಳೆದುಕೊಂಡಿದ್ದು, ದಿಕ್ಕು ತೋಚದಂತಾಗಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.
ಅಂದ ಹಾಗೆ ಮೋಸಕ್ಕೆ ಒಳಗಾದ ಬಟ್ಟೆ ವ್ಯಾಪಾರಿ ಮಹಾವೀರ ಕಾಲನಿಯ ವಿಶಾಲಕುಮಾರ ರವೀಂದ್ರ ಜೈನ್ ಎಂಬುವರಾಗಿದ್ದು, ವೈಶಾಲಿ ಸಾರೀಸ್ ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದಾರೆ. ವ್ಯವಸ್ಥಿತವಾಗಿ ಹೆಣೆದ ಮೋಸದ ಜಾಲಕ್ಕೆ ಬಲಿಯಾಗಿರುವ ವಿಶಾಲಕುಮಾರ ಹಂತ ಹಂತವಾಗಿ ಅರ್ಧ ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ವಂಚಕರು ಹೆಣೆದ ತಂತ್ರ ಮಾತ್ರ ಎಂಥವರನ್ನೂ ನಿಬ್ಬೆರಗಾಗಿಸುವಂಥದ್ದಾಗಿದೆ.
2023 ಜೂ.19ರಂದು ಮಧ್ಯಾಹ್ನ 2ರ ಸುಮಾರಿಗೆ ವಿಶಾಲಕುಮಾರ ಅವರ ಮೊಬೈಲ್‌ಗೆ ಅನಾಮಧೇಯ ವ್ಯಕ್ತಿಯೊಬ್ಬರು ವಿಶಾಲಕುಮಾರ ಅವರ ಮೊಬೈಲ್ ಸಂಖ್ಯೆಯನ್ನು ‘ಫಂಡ್‌ಬೇಸ್-5’ ಎಂಬ ವಾಟ್ಸಪ್ ಗುಂಪಿಗೆ ಸೇರ್ಪಡೆಗೊಳಿಸುತ್ತಾರೆ. ಅದರಲ್ಲಿ ಹಲವು ಜನರ ಸಂಪರ್ಕ ಸಂಖ್ಯೆಗಳಿದ್ದು ಅದರಲ್ಲೊಬ್ಬಾತ ಸಂದೇಶ ಕಳುಹಿಸುತ್ತಾ, ‘ಕ್ರಿಪ್ಟೋ ಮೈನಿಂಗ್ ಮಾಡಲು ಹಣ ಹೂಡಿಕೆ ಮಾಡಿದರೆ ಹೂಡಿದ ಹಣದ ಜೊತೆಗೆ ಪ್ರತಿಶತಃ 200 ಲಾಭಾಂಶ ನೀಡುವುದಾಗಿ’ ತಿಳಿಸುತ್ತಾರೆ. ಮಾತ್ರವಲ್ಲ, ತಮ್ಮದು ಯುನೈಟೆಡ್ ಸ್ಟೇಟ್ ಆಫ್ ಅಮೇರಿಕಾದ ನೋಂದಾಯಿತ ಕಂಪನಿಯಾಗಿದ್ದು, ಯಾವುದೇ ವಂಚನೆಯಿಲ್ಲದಂತೆ ಹೂಡಿಕೆದಾರರಿಗೆ ಲಾಭಾಂಶ ಒದಗಿಸಿಕೊಡುವ ಉದ್ದೇಶ ಹೊಂದಿದೆ. ಜಗತ್ತಿನ ನಾನಾ ಭಾಗಗಳಲ್ಲಿ ನಮ್ಮ ಶಾಖೆಗಳಿದ್ದು, ಭಾರತದಲ್ಲೂ ನಮ್ಮ ಪ್ರತಿನಿಧಿಗಳು ತಮಗೆ ಸಹಕರಿಸಲಿದ್ದಾರೆ ಎಂಬಿತ್ಯಾದಿ ಕಂಪನಿ ಸಂಬಂಧಿತ ವಿವರ ನೀಡುತ್ತಾರೆ.
ಹೀಗೆ ನಿರಂತರ ಸಂದೇಶಗಳಿಗೆ ಅನುಗುಣವಾಗಿ ವಾಟ್ಸಪ್ ಗುಂಪನಿಲ್ಲಿದ್ದವರೂ ಸಹ ಪ್ರತಿಕ್ರಿಯಿಸುತ್ತಾ ತಮಗೂ ಲಾಭಾಂಶ ಸಿಕ್ಕಿದ್ದಾಗಿ ತಿಳಿಸುತ್ತಾರೆ. ಇದನ್ನು ನಂಬಿದ ವಿಶಾಲಕುಮಾರ ತಾವೂ ಹಣ ತೊಡಗಿಸುವ ವಿಚಾರ ಮಾಡುತ್ತಾರೆ. ಕಂಪನಿಗೆ ಸಂಬಂಧಿಸಿದ ಜಾಲತಾಣವನ್ನು ಸಂಪರ್ಕಿಸಲಾಗಿ ಅದರಲ್ಲಿ ಹಲವು ಯೋಜನೆಗಳನ್ನು ನೀಡಿದ್ದು, ಅದರಲ್ಲಿ ಆರಂಭದಲ್ಲಿ 2000 ರೂಪಾಯಿಯ ಪ್ಲಾನ್‌ಗೆ ವಿಶಾಲಕುಮಾರ ಕ್ಲಿಕ್ಕಿಸುತ್ತಾರೆ. ಕೂಡಲೇ ಹೂಡಿಕೆಯ ಲಾಭಾಂಶ ಎಂದು ಹೇಳಿ 2720 ರೂಪಾಯಿ ತೋರಿಸುತ್ತದೆ. ಬಳಿಕ ವಿಶಾಲ ಕುಮಾರ ಮೊತ್ತ ಹೆಚ್ಚಿಸುತ್ತಾ ಹೋದಂತೆ ಲಾಭಾಂಶ ಕೂಡ ಏರಿಕೆಯಾಗುತ್ತದೆ.
ಮುಂದೊಂದು ದಿನ ಸಣ್ಣ ಮೊತ್ತದ ಬದಲಿಗೆ ಒಮ್ಮೆಲೆ 1 ಲಕ್ಷ ರೂಪಾಯಿ ಹಾಕುವಂತೆ ಪ್ರೇರೇಪಿಸಲಾಗಿ ವಿಶಾಲಕುಮಾರ ಹೇಳಿದಷ್ಟು ಹಣ ಸಂದಾಯ ಮಾಡುತ್ತಾರೆ. ಆ ಪ್ಲಾನ್‌ಗೆ ಅರ್ಹತೆ ಪಡೆಯಲು 6.96 ಲಕ್ಷ ಹಾಕಬೇಕೆಂದು ತಿಳಿಸಲಾಗಿ ಅದನ್ನೂ ಪಾಲಿಸುತ್ತಾರೆ. ನಂತರ ಗ್ಯಾಸ್ ಫೀ ಎಂದು 5.60 ಲಕ್ಷ, ಲಾಭಾಂಶ ಡ್ರಾ ಮಾಡಲೆಂದು 5.98 ಲಕ್ಷ, ತೆರಿಗೆ ಎಂದು ಹೇಳಿ 46 ಸಾವಿರ, ಹಣ ವಿಳಂಬವಾಯಿತೆಂದು ದಂಡದ ಹಣ ಎಂದೆಲ್ಲಾ ಹೇಳಿ ಲಕ್ಷ ಲಕ್ಷ ಪೀಕಿದ್ದಾರೆ. ಹಣ ಇಲ್ಲದಾದಾಗ ವಿಶಾಲಕುಮಾರ ಮಡದಿಯ ಖಾತೆಯಿಂದಲೂ ಹಣ ಸಂದಾಯ ಮಾಡಿದ್ದಾರೆ. ಕೊನೆಗೆ ಲಾಭಾಂಶ ನೀಡಲೆಂದು ವೈಯಕ್ತಿಕ ವಿವರವೆಲ್ಲ ತರಿಸಿಕೊಂಡಿದ್ದು, ಬ್ಯಾಂಕ್ ಖಾತೆ ವಿವರ ಮತ್ತು ಪಾಸ್‌ವರ್ಡ್ ಎಲ್ಲ ಪಡೆದಿದ್ದಾರೆ. ಅಷ್ಟಾದರೂ ಲಾಭಾಂಶ ನೀಡದೆ ಮತ್ತೆ ಮತ್ತೆ ಹಣಕ್ಕೆ ಒತ್ತಾಯಿಸಿದಾಗ ಬೇಸತ್ತ ವಿಶಾಲಕುಮಾರ ಯಾವುದೇ ಲಾಭಾಂಶ ಬೇಡ ಹೂಡಿಕೆ ಮಾಡಿದ ಹಣವನ್ನಷ್ಟೇ ನೀಡಿದರೆ ಸಾಕೆಂದು ಕೇಳಿದ್ದಾರೆ. ಆದರೆ, ಹೂಡಿಕೆ ಹಣವೂ ಇಲ್ಲ, ಲಾಭಾಂಶವೂ ನೀಡದೇ ವಂಚಿಸಿದ್ದಾರೆ. ಮೋಸದ ಅರಿವಾಗಿ ವಿಶಾಲಕುಮಾರ ಸೈಬರ್ ಠಾಣೆ ಮೊರೆಹೋಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಿಪಿಐ ರಮೇಶ ಅವಜಿ ಪೊಲೀಸ್ ಅಧೀಕ್ಷಕರ ಸೂಚನೆ ಮತ್ತು ಮಾರ್ಗದರ್ಶನದ ಮೇರೆಗೆ ವಂಚಕರ ಪತ್ತೆಗೆ ಜಾಲ ಬೀಸಿದ್ದಾರೆ.
ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಶೀಘ್ರದಲ್ಲಿಯೇ ಇಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸಲಾಗುವುದು. ಈವರೆಗೆ ಆದ ಪ್ರಕರಣಗಳು, ತನಿಖೆ ಸಂಬಂಧಿಸಿದ ಮಾಹಿತಿ ಬಿಡುಗಡೆಗೊಳಿಸಲಾಗುವುದು. ಬಟ್ಟೆ ವ್ಯಾಪಾರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖಾ ತಂಡ ರಚಿಸಲಾಗಿದೆ. ಶೀಘ್ರದಲ್ಲಿಯೇ ಪ್ರಕರಣ ಭೇದಿಸಲಾಗುವುದು. ಭಗವಾನ ಋಷಿಕೇಶ ಸೋನವಾನೆ, ಜಿಲ್ಲಾ ಪೊಲೀಸ್ ಅಧೀಕ್ಷಕ