ಆಡೇಸೊನ್ನಹಟ್ಟಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 44ರ ಬಳಗಾರನಹಳ್ಳಿ, ಬಂಡಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿರುವುದು. 
ಜಿಲ್ಲೆ

ಗುಂಡಿ ಬಿದ್ದ ರಸ್ತೆಯಲ್ಲಿ ವಾಹನ ಸವಾರರ ಸರ್ಕಸ್​

ಆನೇಕಲ್​ : ತಾಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡೇಸೊನ್ನ ಹಟ್ಟಿ ಗ್ರಾಮದಿಂದ ಬಳಗಾರನಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಮಳೆ ಬಂದಾಗ ರಸ್ತೆ ಗುಂಡಿಗಳಲ್ಲಿ ನೀರು, ಬಿಸಿಲಿದ್ದಾಗ ಧೂಳು, ರಸ್ತೆ ಗುಂಡಿಗಳ ನಡುವೆ ರಸ್ತೆಯನ್ನು ಹುಡುಕಬೇಕಾದ ದುಸ್ಥಿತಿ ಪ್ರಯಾಣಿಕರದ್ದಾಗಿದೆ.

ಆಡೇಸೊನ್ನಹಟ್ಟಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 44ರ ಬಳಗಾರನಹಳ್ಳಿ, ಬಂಡಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟಿದ್ದು, ಪ್ರತಿನಿತ್ಯ ಸಾರ್ವಜನಿಕರು ಪರದಾಡುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ತಂತಿ ಮೇಲಿನ ನಡಿಗೆಯಂತೆ ಸಾಗಬೇಕಾಗಿದೆ. ಸ್ವಲ್ಪ ಯಾಮಾರಿದರೂ ಗುಂಡಿಗೆ ಬೀಳುವುದು ಖಚಿತ. 2 ಕಿ.ಮೀ.ಗೂ ಹೆಚ್ಚು ದೂರ ರಸ್ತೆ ಗುಂಡಿಗಳಿಂದ ತುಂಬಿದೆ. ಈ ನಡುವೆ ದ್ವಿಚಕ್ರ ವಾಹನಗಳು ಸಾಗಲು ಸಹ ಮಾರ್ಗವಿಲ್ಲದಂತಾಗಿದೆ. ಈ ಹದಗೆಟ್ಟ ರಸ್ತೆಯಲ್ಲಿ ಹಲವಾರು ಅಪಾರ್ಟ್​ ಮೆಂಟ್​ಗಳು, ಬಡಾವಣೆಗಳಿವೆ. ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಆದರೆ, ರಸ್ತೆ ಸಮಸ್ಯೆಯಿಂದಾಗಿ ಸವಾರರು ರಸ್ತೆಯನ್ನೇ ತೊರೆಯಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ.

ಆಡೇಸೊನ್ನಹಟ್ಟಿಯ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭಾರಿ ಮಳೆಯಿಂದಾಗಿ ರಸ್ತೆ ಸಮಸ್ಯೆ ಉಂಟಾಗಿದ್ದು, ಒಂದೆರಡು ತಿಂಗಳಲ್ಲಿ ಹೊಸ ರಸ್ತೆಗೆ ಭೂಮಿ ಪೂಜೆ ಮಾಡಲಾಗುವುದು. ತಾಲೂಕಿನ ರಸ್ತೆ ಅಭಿವೃದ್ಧಿಪಡಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. > ಬಿ.ಶಿವಣ್ಣ ಶಾಸಕ