ಜಿಲ್ಲೆ

ಕಾರ್ವಿುಕರ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರ

ಉಪ್ಪಿನಬೆಟಗೇರಿ: ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಪ್ರಾರಂಭಿಸಲಾಗುತ್ತಿರುವ ಶಿಶುಪಾಲನಾ ಕೇಂದ್ರದ ಪೂರ್ವ ತಯಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಟಿ.ಕೆ. ಸ್ವರೂಪ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲಿಸಿತು.

ಜಿಪಂ ಸಿಇಒ ಟಿ.ಕೆ. ಸ್ವರೂಪ ಮಾತನಾಡಿ, ಜಿಲ್ಲಾದ್ಯಂತ ದೊಡ್ಡ ಮಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನರೇಗಾ ಯೋಜನೆಯಡಿ ಶಿಶುಪಾಲನಾ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಮೂರು ವರ್ಷದ ಒಳಗಿನ ಮಕ್ಕಳ ಲಾಲನೆ, ಪಾಲನೆಗಾಗಿ ಈ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ವಿಶೇಷವಾಗಿ ನರೇಗಾ ಯೋಜನೆಯಡಿ ದುಡಿಯುವ ಕೂಲಿ ಕಾರ್ವಿುಕರ ಮಕ್ಕಳಿಗಾಗಿ ಈ ಯೋಜನೆ ಜಾರಿ ಮಾಡಲಾಗಿದ್ದು, ಗ್ರಾಮದಲ್ಲಿ ಯಾವುದೇ ಪಾಲಕರು ಎಲ್ಲೇ ಕೆಲಸ ನಿರ್ವಹಿಸಿದರೂ ತಮ್ಮ ಮಕ್ಕಳನ್ನು ಇಲ್ಲಿ ಬಿಡಬಹುದು. ಈ ಕೇಂದ್ರದ ನಿರ್ವಹಣೆಗಾಗಿ ಮಹಿಳೆಯರನ್ನು ನೇಮಿಸಲಾಗುತ್ತಿದ್ದು, ಈಗಾಗಲೇ ಅವರಿಗೆ ತರಬೇತಿಯನ್ನೂ ನೀಡಲಾಗಿದೆ. ಆ. 10ರಂದು ಈ ಕೇಂದ್ರಗಳು ಕಾರ್ಯಾರಂಭ ಮಾಡಲಿದ್ದು, ಆ. 15ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿವೆ ಎಂದರು.

ಕೇಂದ್ರಕ್ಕೆ ಆಗಮಿಸುವ ಮಕ್ಕಳಿಗೆ ಬೇಕಾದ ಆಹಾರ ಸೇರಿ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಸ್ಥಳೀಯ ಗ್ರಾಮ ಪಂಚಾಯಿತಿ ನೋಡಿಕೊಳ್ಳಬೇಕಿದ್ದು, ಇದಕ್ಕಾಗಿಯೇ ಸರ್ಕಾರದಿಂದ ಪ್ರತ್ಯೇಕ ಅನುದಾನ ಬಿಡುಗಡೆಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕೊಠಡಿಯ ವ್ಯವಸ್ಥೆ ಸೇರಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಹಾಗೂ ಅಧಿಕಾರಿಗಳಿಗೆ ತಿಳಿಸಿದರು.‘ಈಗಾಗಲೇ ಸುಸಜ್ಜಿತ ಕೊಠಡಿಯ ವ್ಯವಸ್ಥೆ ಮಾಡಲಾಗಿದ್ದು, ಅವಶ್ಯವಿರುವ ಎಲ್ಲ ಪರಿಕಗಳನ್ನು ಒದಗಿಸಲಾಗುವುದು’ ಎಂದು ಗ್ರಾಪಂ ಅಧ್ಯಕ್ಷ ಮಂಜುನಾಥ ಮಸೂತಿ ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಮೂಗೂನೂರಮಠ, ತಾಪಂ ಇಒ ಎ.ಡಿ. ಗಂಗಾಧರ, ಚಂದ್ರಶೇಖರ ಪೂಜಾರ, ಪಿಡಿಒ ಬಿ.ಎ. ಬಾವಾಖಾನವರ, ವಿರೂಪಾಕ್ಷಪ್ಪ ಬಮ್ಮಶೆಟ್ಟಿ, ಫಕೀರಪ್ಪ ಶಿವಳ್ಳಿ, ಇತರರಿದ್ದರು.