ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಉದ್ಯೋಗ ಅರಸಿ ಉತ್ತರ ಭಾರತದ ಕಡೆಯಿಂದ ವಲಸೆ ಬಂದ ಬಡ ದಂಪತಿ, ಜತೆಗೊಂದು ಪುಟ್ಟ ಮಗು. ದಂಪತಿ ತುತ್ತಿನ ಚೀಲದ ಹುಡುಕಾಟದಲ್ಲಿದ್ದಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದ ಒಂದೂವರೆ ವರ್ಷದ ಹೆಣ್ಣುಮಗುವಿನ ದಿಢೀರ್ ಸಾವು. ದಿಕ್ಕು ತೋಚದೆ ಕಂಗಾಲಾದ ಪಾಲಕರಿಗೆ ಮಗುವಿನ ಶವ ಸಂಸ್ಕಾರ ನಡೆಸುವುದು ಎಲ್ಲಿ? ಹೇಗೆ ಎಂಬ ಸಂದಿಗ್ಧ ಪರಿಸ್ಥಿತಿ. ಕಡೆಗೆ ಚರಂಡಿಯೊಂದರ ಬಳಿ ಕರುಳ ಬಳ್ಳಿಯ ಶವವನ್ನು ಅನಾಥವಾಗಿ ಮಲಗಿಸಿ ಬಿಟ್ಟು ಹೊರಟೇ ಬಿಡುವ ಕರುಣಾಜಕ ಸ್ಥಿತಿ.
ತಾಲೂಕಿನ ಬಾಶೆಟ್ಟಿಹಳ್ಳಿಯ ಬಳಿ ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ರಸ್ತೆ ಬದಿ ಇಂಥದ್ದೊಂದು ಮನಕಲಕುವ ಪ್ರಕರಣ ಬೆಳಕಿಗೆ ಬಂದಿದ್ದು. ವಿಧಿ ವಿಪರೀತಕ್ಕೆ ಚರಂಡಿ ಪಾಲಾಗಿದ್ದ ಮಗುವಿನ ಅಂತ್ಯಸಂಸ್ಕಾರವನ್ನು ಕಡೆಗೆ ಪೊಲೀಸರೇ ನೆರವೇರಿಸಿದ್ದಾರೆ.
ಚರಂಡಿ ಬಳಿ ಪತ್ತೆಯಾಗಿದ್ದ ಮಗುವಿನ ಶವ: ಡಿ.4ರಂದು ಒಂದೂರವರೆ ವರ್ಷದ ಹೆಣ್ಣು ಮಗುವಿನ ಶವ ತಾಲೂಕಿನ ಬಾಶೆಟ್ಟಿಹಳ್ಳಿಯ ಬಳಿ ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ರಸ್ತೆ ಬದಿಯ ಚರಂಡಿ ಬಳಿ ಪತ್ತೆಯಾಗಿತ್ತು, ಆದರೆ ಮೃತ ಮಗುವಿನ ಪಾಲಕರ ಬಗ್ಗೆ ಯಾವುದೇ ಸುಳಿವಿರಲಿಲ್ಲ. ಇತ್ತೀಚಿಗೆ ಮಗುವಿನ ಮಾರಾಟ ಜಾಲ ದೊಡ್ಡ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದರು.
ತಾಯತಾ ನೀಡಿದ ಸುಳಿವು: ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಇದು ಉತ್ತರ ಭಾರತೀಯರ ಮಗುವೆಂದು ಖಚಿತವಾಗಿತ್ತು. ಮಗುವಿನ ಕತ್ತಿನಲ್ಲಿದ್ದ ತಾಯತಾ ಮೃತ ಮಗು ಉತ್ತರ ಭಾರತೀಯ ಮೂಲವೆಂಬುದನ್ನು ದೃಢೀಕರಿಸಿತ್ತು. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಹುತೇಕ ಮಂದಿ ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರು ವಾಸವಿರುವ ಸುಳಿವಿನ ಮೇಲೆ ಪೊಲೀಸರು ಮಗುವಿನ ಭಾವಚಿತ್ರದೊಡನೆ ಬಾಶೆಟ್ಟಿಹಳ್ಳಿ ಸುತ್ತಮುತ್ತ ವಿಚಾರಣೆ ನಡೆಸಿದಾಗ ಕಡೆಗೂ ಪಾಲಕರು ಪತ್ತೆಯಾಗಿದ್ದಾರೆ. ಬಿಹಾರದ ಪ್ರಮೇಶ್ ಕುಮಾರ್ ಮತ್ತು ವಿಭಾ ಕುಮಾರಿ ಎಂಬುದು ಖಚಿತವಾಗಿದ್ದು, ಇಂಥದೊದ್ದು ವಿಧಿ ವಿಪರೀತಕ್ಕೆ ಸಿಲುಕಿದ ಮಗುವಿನ ಹೆಸರು ರುಚಿಕುಮಾರಿ ಎಂಬುದು ತಿಳಿದುಬಂದಿದೆ.
ಆಸ್ಪತ್ರೆಯ ಸಿಸಿಟಿವಿ ದೃಶ್ಯದಲ್ಲಿ ಪತ್ತೆ: ಇದಕ್ಕೂ ಮೊದಲು ಡಿ.3ರಂದು ಮಧ್ಯಾಹ್ನ ಬಾಶೆಟ್ಟಿಹಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ದಂಪತಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ, ಚಿಕಿತ್ಸೆ ಲಕಾರಿಯಾಗದೆ ಅಂದು ಸಂಜೆಯೇ ಮಗು ಕೊನೆಯುಸಿರೆಳೆದಿದೆ. ಪಾಲಕರು ಮಗುವಿನೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿಕೊಂಡು ಹೋಗಿರುವ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಇದನ್ನು ಪರಿಶೀಲಿಸಿದ್ದ ಪೊಲೀಸರು ಪ್ರಕರಣದ ತನಿಕೆ ಅರಂಭಿಸಿದ್ದರು.
ಮೂರು ದಿನದ ಹಿಂದೆ ಬಂದಿದ್ದ ಕಾರ್ಮಿಕರು: ಮೂರ‌್ನಾಲ್ಕು ದಿನದ ಹಿಂದೆಷ್ಟೇ ಬಿಹಾರದಿಂದ ಬಂದಿದ್ದ ಪ್ರಮೇಶ್ ಮತ್ತು ವಿಭಾ ಕುಮಾರಿ ವೀರಾಪುರ ಗ್ರಾಮದಲ್ಲಿ ನೆಲೆ ಕಂಡುಕೊಂಡಿದ್ದರು. ಸ್ಥಳೀಯ ಕೈಗಾರಿಕೆಯಲ್ಲಿ ಉದ್ಯೋಗ ಖಚಿತಪಡಿಸಿಕೊಂಡಿದ್ದರು, ಏತನ್ಮಧ್ಯೆ ಅನಾರೋಗ್ಯದಿಂದ ಬಳಲುತ್ತಿದ್ದ ಮಗು ರುಚಿಕುಮಾರಿ ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದೆ, ಮಗುವಿನ ಶವ ಸಂಸ್ಕಾರ ಮಾಡುವುದು ಹೇಗೆಂಬ ಗೊಂದಲದಲ್ಲಿದ್ದ ದಂಪತಿ ಶವವನ್ನು ಚರಂಡಿ ಬಳಿ ಇಟ್ಟು ಮರಳಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಶವಗಾರದ ಬಳಿಯ ಸ್ಮಶಾನದಲ್ಲಿಯೇ ಪೊಲೀಸರು ಮಗುವಿನ ಅಂತ್ಯಕ್ರಿಯೆ ನೇರವೇರಿಸಿದರು.