ಜಮಖಂಡಿ ನಗರದ ಮೊಮಿನ್ ಗಲ್ಲಿಯಲ್ಲಿ ಮನೆ ಮೇಲ್ಛಾವಣಿ ಕುಸಿದು ಮೃತಪಟ್ಟ ಮುಸ್ತಾಕ್ ಅವಟಿ ಅವರ ಪತ್ನಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಪರಿಹಾರದ ಚೆಕ್ ವಿತರಿಸಿದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಮಾಜಿ ಶಾಸಕ ಆನಂದ ನ್ಯಾಮಗೌಡ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಇತರರಿದ್ದರು. 
ಜಿಲ್ಲೆ

ಮೃತನ ಪತ್ನಿಗೆ 5 ಲಕ್ಷ ರೂಗಳ ಚೆಕ್ ವಿತರಣೆ

ಜಮಖಂಡಿ: ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮನೆ ಛಾವಣಿ ಕುಸಿದು ಸಾವನ್ನಪ್ಪಿದ ಮುಸ್ತಾಕ್ ಅವಟಿ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಭಾನುವಾರ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಮೃತರ ಕುಟುಂಬಕ್ಕೆ 5 ಲಕ್ಷ ರೂಗಳ ಪರಿಹಾರದ ಚೆಕ್ ವಿತರಿಸಿದರು. ರಾಷ್ಟ್ರೀಯ ಭದ್ರತಾ ಯೋಜನೆಯಡಿ 20 ಸಾವಿರ ನೀಡಲು ಅಧಿಕಾರಿಗಳಿಗೆ ಹೇಳಿದರು.
ಮೃತನ ಪತ್ನಿಗೆ ಅಂಗನವಾಡಿಯಲ್ಲಿ ಕೆಲಸ ಹಾಗೂ ಸರ್ಕಾರದ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಮಖಂಡಿ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಮಣ್ಣಿನ ಮನೆ ಹಾಗೂ ಬೀಳುವ ಹಂತ ತಲುಪಿರುವ ಮನೆಗಳನ್ನು ಕೂಡಲೇ ಎರಡು ದಿನಗಳಲ್ಲಿ ವರದಿ ತಯಾರಿಸಿ ನೀಡಲು ಸೂಚಿಸಿದರು. ತುರ್ತಾಗಿ ಸಮಸ್ಯೆ ಇರುವವರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಅನಾಹುತ ಆಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರು ವೈಯ್ಯಕ್ತಿಕವಾಗಿ 10 ಸಾವಿರ ರೂಗಳನ್ನು ನೀಡುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಮಾಜಿ ಶಾಸಕ ಆನಂದ ನ್ಯಾಮಗೌಡ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಮುಖಂಡ ತೌಫೀಕ್ ಪಾರ್ಥನಳ್ಳಿ, ನಗರಸಭೆ ಸದಸ್ಯ ದಿಲಾವರ ಶಿರೋಳ, ಆಜಂ ಅವಟಿ, ಅನ್ವರ ಮೋಮಿನ್, ಅಬೂಬಕರ್ ಕುಡಚಿ, ಕಂದಾಯ ನಿರೀಕ್ಷಕ ವಿನಯ ಪಾಟೀಲ, ವಿಜಯಕುಮಾರ ವಂದಾಲ ಇತರರಿದ್ದರು.