ಸಚಿವ ಶರಣ ಪ್ರಕಾಶ್ ಪಾಟೀಲ್  
ಜಿಲ್ಲೆ

ರಾಜ್ಯದಲ್ಲಿ ಬಿಜೆಪಿ ಕಥೆ ಮುಗಿದುಹೋದ ಅಧ್ಯಾಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಅವರ ಪಕ್ಷದ ಆಂತರಿಕ ವಿಚಾರವಾಗಿದ್ದು ರಾಜ್ಯದಲ್ಲಿ ಬಿಜೆಪಿ ಕಥೆ ಮುಗಿದುಹೋದ ಅಧ್ಯಾಯವಾಗಿದೆ ಎಂದು ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಅವರಿಗೆ ನಂಬಿಕೆಯೇ ಇಲ್ಲ. ಶಾಸಕರನ್ನು ಖರೀದಿಸಿ ಐದು ವರ್ಷ ಆಡಳಿತ ನಡೆಸಿದ ಬಿಜೆಪಿಗೆ ಈಗಾಗಲೇ ಜನರು ತಕ್ಕ ಪಾಠ ಕಲಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮತ್ತೊಮ್ಮೆ ಬುದ್ದಿ ಕಲಿಸುತ್ತಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಯಾರನ್ನೇ ಮಾಡಿದರೂ ಕಾಂಗ್ರೆಸ್ ಯಾವುದೇ ನಷ್ಟವಿಲ್ಲ. ಬಿ.ವೈ.ವಿಜಯೇಂದ್ರ ಅವರ ನೇಮಕದಿಂದ ರಾಜ್ಯದಲ್ಲಿ ಯಾವುದೇ ಪರಿಣಾಮವೂ ಬೀರುವುದಿಲ್ಲ ಎಂದರು.
ಕೆಇಎ(ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಪರೀಕ್ಷಾ ಅಕ್ರಮದ ಕಿಡಿಗೇಡಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅಕ್ರಮಕ್ಕೆ ಸ್ಕೂಪ್ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ರಾಜ್ಯದ ಯುವಕರು ಇಡೀ ವ್ಯವಸ್ಥೆ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದರು. ಇದೀಗ ನೇಮಕಾತಿಗಳನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಪಿಎಸ್‌ಐ ಹಗರಣವನ್ನು ಹೊರಗೆಳೆದಿದ್ದೇ ಸಚಿವ ಪ್ರಿಯಾಂಕ ಖರ್ಗೆ ಎಂದು ಹೇಳಿದರು.