ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಾವಿನ ರಹಸ್ಯ ಬಯಲಾಗಿದ್ದು, ಅಕ್ರಮ ಸಂಬಂಧವೇ ಇದಕ್ಕೆಲ್ಲ ಕಾರಣ ಎಂದು ಗೊತ್ತಾಗಿದೆ.
ಕಾಂಗ್ರೆಸ್ ಮುಖಂಡ ಜೈನುಲ್ಲಾ ಖಾನ್ ಮೃತದುರ್ದೈವಿ. ಈತ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷನಾಗಿದ್ದ. ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ನಿವಾಸಿಯಾಗಿದ್ದ ಈತನನ್ನು ಸೆ.2ರಂದು ಇದೇ ಊರಿನ ಗುಡ್ಡದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ಹೂತು ಹಾಕಲಾಗಿತ್ತು. ಈ ಪ್ರಕರಣದ ಬೆನ್ನುಹತ್ತಿದ ಪೊಲೀಸರು, ಮೂವರನ್ನ ಬಂಧಿಸಿದ್ದಾರೆ.
ಅಮ್ಜಾದ್ ಖಾನ್(44), ಇಸ್ಮಾಯಿಲ್ ಖಾನ್ (42) ಮತ್ತು ನೂರ್ ಅಹ್ಮದ್ (36) ಬಂಧಿತರು. ಅಮ್ಜದ್ ಖಾನ್ ಪತ್ನಿಯ ಜತೆ ಜೈನುಲ್ಲಾ ಖಾನ್ ವಿವಾಹೇತರ ಸಂಬಂಧ ಹೊಂದಿದ್ದನಂತೆ. ಈ ವಿಷಯ ತಿಳಿದ ಅಮ್ಜದ್, ಜೈನುಲ್ಲಾನನ್ನು ಮುಗಿಸಲು ತನ್ನ ಸಹೋದರ ಇಸ್ಮಾಯಿಲ್ ಖಾನ್ ಮತ್ತು ಸ್ನೇಹಿತ ನೂರ್ ಅಹ್ಮದ್ ಜತೆ ಸಂಚು ರೂಪಿಸಿದ್ದ. ಅದರಂತೆ ಸೆ.2ರಂದು ಜೈನುಲ್ಲಾ ಖಾನ್ನನ್ನು ಹತ್ಯೆ ಮಾಡಿ ಹೂತು ಹಾಕಿದ್ದರು. ಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಸವಾಪಟ್ಟಣ ಠಾಣೆ ಪೋಲಿಸರು ಬಂಧಿಸಿದ್ದಾರೆ.