ಮಡಿಕೇರಿ: ಜಿಲ್ಲೆಯ ಎಲ್ಲೆಡೆ ’ಹ್ಯಾಪಿ ನ್ಯೂ ಇಯರ್’ ಘೋಷಣೆಯ ಸಂಭ್ರಮದೊಂದಿಗೆ ೨೦೨೨ ಅನ್ನು ಸಡಗರದಿಂದ ಬೀಳ್ಕೊಡಲಾಯಿತು. ಜಿಲ್ಲೆ, ಹೊರ ಜಿಲ್ಲೆಯಿಂದ ಆಗಮಿಸಿದ್ದ ಪ್ರವಾಸಿಗರ ಜತೆ ಜಿಲ್ಲೆಯ ಜನ ಕೂಡಾ ನೂತನ ವರ್ಷವನ್ನು ಬರಮಾಡಿಕೊಳ್ಳುವ ಜತೆಗೆ ೨೦೨೨ಕ್ಕೆ ವಿದಾಯ ಹೇಳಿದರು.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ನಿಸರ್ಗಧಾಮ, ದುಬಾರೆ, ರಾಜಾಸೀಟ್, ಅಬ್ಬಿಫಾಲ್ಸ್ ಸೇರಿದಂತೆ ಬಹುತೇಕ ಕಡೆ ಪ್ರವಾಸಿಗರ ದಂಡು ಆಗಮಿಸಿತ್ತು. ವರ್ಷಾಂತ್ಯ ಸಂಭ್ರಮಕ್ಕೆ ಸಿದ್ಧವಾಗಿ ಬಂದಿದ್ದ ಮಂದಿ ತಮ್ಮ ಸ್ನೇಹಿತ ವರ್ಗದ ಜತೆ ವರ್ಷದ ಕಡೆಯ ಕ್ಷಣವನ್ನು ಕಳೆದರು.
ಮಡಿಕೇರಿಯ ರಾಜಾಸೀಟ್‌ನಲ್ಲಿ ೨೦೨೨ರ ಅಂತಿಮ ಸೂರ್ಯಾಸ್ತ ಕಣ್ತುಂಬಿಕೊಳ್ಳಲು ಪ್ರವಾಸಿಗರು ಕಿಕ್ಕಿರಿದು ಸೇರಿದ್ದರು. ಸೂರ್ಯ ಬಾನಂಚಿನಲ್ಲಿ ಮೈ ಕೆಂಪೇರಿಸುತ್ತಾ ಮರೆಯಾಗುತ್ತಿದ್ದಂತೆ ’ಹ್ಯಾಪಿ ನ್ಯೂ ಇಯರ್’ ಎಂಬ ಕೂಗು ರಾಜಾಸೀಟ್‌ನಲ್ಲಿ ಮಾರ್ಧನಿಸಿತು. ಸುಂದರ ಸನ್ನಿವೇಶದೆದುರು ನಿಂತು ಮೊಬೈಲ್, ಕ್ಯಾಮರಾಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು.
ರಾತ್ರಿ ವೇಳೆ ವಿವಿಧೆಡೆ ಹೊಸ ವರ್ಷದ ಸ್ವಾಗತಕ್ಕಾಗಿ ವೈವಿಧ್ಯಮಯ ಪಾರ್ಟಿ ಆಯೋಜನೆಗೊಂಡಿದ್ದವು. ಅನೇಕ ಮಂದಿ ಮಧ್ಯರಾತ್ರಿ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಿದರೆ, ಇನ್ನೂ ಹಲವು ಮಂದಿ ತಮ್ಮದೇ ಆದ ರೀತಿಯಲ್ಲಿ ನೂತನ ವರ್ಷವನ್ನು ಬರಮಾಡಿಕೊಂಡರು. ಚುಮುಚುಮು ಚಳಿಯಿಂದ ಕೂಡಿದ ವಾತಾವರಣ ಕೂಡಾ ಸಾರ್ವಜನಿಕರ ಸಂಭ್ರಮಕ್ಕೆ ಸಾಥ್ ನೀಡಿತ್ತು.
ಕೊಡಗಿನ ಬಹುತೇಕ ಹೋಂಸ್ಟೇಗಳು ಹೊಸ ವರ್ಷದ ಸಂಭ್ರಮಕ್ಕೆ ಭರ್ತಿಯಾಗಿ ದುಪ್ಪಟ್ಟು ದರ ವಿಧಿಸಲಾಯಿತು. ಕೆಲವರು ಹೋಂಸ್ಟೇಗಳಲ್ಲಿ ತಯಾರಿಸಿದ ಅಡುಗೆ ಸವಿದರು. ಪಂದಿ ಕರಿ, ಚಿಕನ್ ಕಬಾಬ್, ಕೊಡಗಿನ ಕಡುಬು, ಬಿರಿಯಾನಿ ಸೇರಿದಂತೆ ನಾನಾ ಬಗೆಯ ಖಾದ್ಯಗಳನ್ನು ವಿಶೇಷವಾಗಿ ತಯಾರಿಸಲಾಗಿತ್ತು. ಕ್ಯಾಂಪ್ ಪೈರ್‌ನೊಂದಿಗೆ ಯುವಕ-ಯುವತಿಯರು ನೃತ್ಯ ಮಾಡುತ್ತಿದ್ದ ದೃಶ್ಯವೂ ಕಂಡುಬಂತು. ಮಡಿಕೇರಿ ಸೇರಿದಂತೆ ಕೊಡಗಿನ ವಿವಿಧೆಡೆ ಇರುವ ವೈನ್ಸ್ ಶಾಪ್‌ಗಳಲ್ಲಿ ಶನಿವಾರ ಸಂಜೆ ದೊಡ್ಡ ಸರದಿ ಸಾಲು ಕಂಡುಬಂತು. ಕೆಲವರು ಬಾಕ್ಸ್‌ಗಟ್ಟಲೆ ಮದ್ಯ ಖರೀದಿಸಿ ಕೊಂಡೊಯ್ದು ಪಾರ್ಟಿ ಮಾಡಿದರು.