ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕಲಾದಗಿಯಲ್ಲಿ ಕಲೆ ಮತ್ತು ಸಾಂಸ್ಕೃತಿಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಜಾನಪದ ಪರಿಷತ್ ಸಂಯುಕ್ತ ಆಶ್ರಯದಲ್ಲಿ ನಡೆದ ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆಯಲ್ಲಿ ಗಮನಸೆಳೆದ ಬೊಂಬೆಗಳ ಕುಣಿತ. 
ಜಿಲ್ಲೆ

ಸಂಭ್ರಮದ ಭುವನೇಶ್ವರಿದೇವಿ ಭಾವಚಿತ್ರ ಮೆರವಣಿಗೆ

ಕಲಾದಗಿ: ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಗ್ರಾಪಂ ಸದಸ್ಯ ಎಂ.ಎ. ತೇಲಿ ಹೇಳಿದರು.

ಕಲೆ ಮತ್ತು ಸಾಂಸ್ಕೃತಿಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಜಾನಪದ ಪರಿಷತ್ ಆಶ್ರಯದಲ್ಲಿ ಗ್ರಾಮದಲ್ಲಿ ಭಾನುವಾರದಂದು ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಮನೆ, ಮನಗಳೆಲ್ಲ ಕನ್ನಡಮಯವಾಗಿರಲಿ, ಇವತ್ತಿನ ದಿನ ನಾವೆಲ್ಲರೂ ಸಡಗರ ಸಂಭ್ರಮದಿಂದ ಎಲ್ಲ ಜಾತಿ-ಧರ್ಮಗಳ ಜನರು ಸೇರಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದು ಹೆಮ್ಮೆಯ ಸಂಗತಿ ಎಂದರು. ಹಣಮಂತ ಹೊಸಕೋಟಿ, ಪತ್ರಕರ್ತ ಚಂದ್ರಶೇಖರ ಹಡಪದ ಮಾತನಾಡಿದರು.

ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ತಾಯಿ ‘ಭುವನೇಶ್ವರಿ ದೇವಿಯ’ ಭಾವಚಿತ್ರ ಮೆರವಣಿಗೆಯಲ್ಲಿ ಮುಧೋಳದ ಮ್ಯೂಜಿಕಲ್ ಬ್ಯಾಂಜೋ ಹಾಗೂ ಈಶ್ವರ ಗಾರೂಡಿಗ ಗೆಳೆಯರ ಬಳಗದ ಗೊಂಬೆ ಕುಣಿತ ಗಮನಸೆಳೆಯಿತು.

ಕನ್ನಡ ಜಾನಪದ ಪರಿಷತ್‌ನ ವಲಯ ಘಟಕದ ಅಧ್ಯಕ್ಷ ನಿಂಗಪ್ಪ ಅರಕೇರಿ, ಹಣಮಂತ ಹೊಸಕೋಟಿ, ಕಲೆ ಮತ್ತು ಸಾಂಸ್ಕೃತಿಕ ರಕ್ಷಣಾ ವೇದಿಕೆ ಅಧ್ಯಕ್ಷ ಮಲ್ಲಪ್ಪ ಜಮಖಂಡಿ, ಗ್ರಾಪಂ ಉಪಾಧ್ಯಕ್ಷ ಪಕೀರಪ್ಪ ಮಾದರ, ಸದಸ್ಯರಾದ ಶ್ಯಾಮ ಕಾಳೆ, ಮೆಹಬೂಬಸಾಬ ಬನ್ನುರ, ಮುಖಂಡರಾದ ಬಶೆಟ್ಟೆಪ್ಪ ಅಂಗಡಿ, ಕೃಷ್ಣಾ ಪತ್ತಾರ, ನಾಗಪ್ಪ ಗಾಣಿಗೇರ, ರಿಯಾಜ್ ಪೀರಜಾದೆ, ಮಂಜು ಕಾಳೆ, ಗಂಗಪ್ಪ ಮಾದರ, ಬಸವರಾಜ ಬಿಲಕೇರಿ, ಸಿಕಂದರ ಬಾವಾಖಾನ, ಎಂ.ಎಚ್. ನದಾಫ್ ಇತರರಿದ್ದರು.