ಜಿಲ್ಲೆ

ವ್ಯಂಗ್ಯಚಿತ್ರ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಓದುಗರನ್ನು ಹಿಡಿದಿಟ್ಟುಕೊಳ್ಳಲು ವ್ಯಂಗ್ಯಚಿತ್ರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.


ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ವಿಜಯನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಎಂ.ವಿ.ನಾಗೇಂದ್ರಬಾಬು ರಚಿತ ‘ವ್ಯಂಗ್ಯಚಿತ್ರ ಸಿಂಹಾವಲೋಕನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ವ್ಯಂಗ್ಯಚಿತ್ರಗಳಿಂದ ಪತ್ರಿಕೆಯ ಅಭಿರುಚಿ ವೃದ್ಧಿಸುವ ಅವಕಾಶಗಳು ಇವೆ. ಈ ನಿಟ್ಟಿನಲ್ಲಿ ಈ ಕಲೆಗೆ ಪತ್ರಿಕಾರಂಗದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಸುದ್ದಿಗಿಂತ ಕೆಲ ವ್ಯಂಗ್ಯಚಿತ್ರ ಓದುಗರನ್ನು ಆಕರ್ಷಿಸುವ ಮೂಲಕ ಚರ್ಚೆಗೂ ಗ್ರಾಸವಾಗುತ್ತದೆ. ಆದ್ದರಿಂದ ಬಹುತೇಕ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.


ಈ ಕಲೆಗೆ ಪತ್ರಿಕೆಯಲ್ಲಿ ಹೆಚ್ಚು ಮನ್ನಣೆ ಸಿಗುತ್ತದೆ. ಏಕೆಂದರೆ, ಇದು ಪರಿಣಾಮಕಾರಿ ಅಭಿವ್ಯಕ್ತಿ ಮಾಧ್ಯಮ ಆಗಿ ರೂಪಗೊಂಡಿದೆ. ಗಂಭೀರವಾದ ವಿಚಾರವನ್ನು ತಿಳಿ ಹಾಸ್ಯದ ಮೂಲಕ ತಿಳಿಸುವುದೇ ವ್ಯಂಗ್ಯಚಿತ್ರದ ವೈಶಿಷ್ಟೃವಾಗಿದೆ ಎಂದರು.


ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಪತ್ರಿಕೋದ್ಯಮ ಕೆ.ಬಿ.ಗಣಪತಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಉಪಾಧ್ಯಕ್ಷ ಎನ್.ಅನಂತ್, ಜಂಟಿ ಕಾರ್ಯದರ್ಶಿ ಕೆಂಪಣ್ಣ, ಸಮಾಜ ಸೇವಕ ರಘುರಾಮ್ ವಾಜಪೇಯಿ, ಲಕ್ಷ್ಮೀನರಸಿಂಹ ದೇವಸ್ಥಾನ ಸಿಇಒ ಕೆ.ಆರ್.ಯೋಗಾನರಸಿಂಹನ್ ಇನ್ನಿತರರಿದ್ದರು.