ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಸಮೀಪ ಕಾರೊಂದು ಭಾನುವಾರ ಬೆಳಗಿನ ಜಾವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪರಿವರ್ತಕ ಸಮೇತ ಮುರಿದು ಬಿದ್ದಿರುವ ವಿದ್ಯತ್ ಕಂಬ. ಪೊದೆಯೊಳಗೆ ಉರುಳಿ ಬಿದ್ದಿರುವ ಕಾರು. 
ಜಿಲ್ಲೆ

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

ಅಭಿನಯ್ ಎಚ್.ಎಂ

ಮಳವಳ್ಳಿ: ತಾಲೂಕಿನ ಮಂಚನಹಳ್ಳಿ ಸಮೀಪ ಭಾನುವಾರ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿದ್ದ ಪೊದೆಯೊಳಗೆ ಉರುಳಿ ಬಿದ್ದಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ನೆಟ್ಕಲ್ ಗ್ರಾಮದವರು ಎಂದು ಹೇಳಲಾಗುತ್ತಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಅಪಘಾತದ ನಂತರ ಕಾರನ್ನು ಸ್ಥಳದಲ್ಲೇ ಬಿಟ್ಟು ಸ್ನೇಹಿತರೊಡನೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.

ಬೆಳಗಿನ ಜಾವ ನೆಟ್ಕಲ್ ಗ್ರಾಮದಿಂದ ಮಂಚನಹಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಕಡೆಗೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಂಬ ರಸ್ತೆ ಮಧ್ಯಭಾಗಕ್ಕೆ ಮುರಿದುಬಿದ್ದಿದೆ. ಈ ವೇಳೆ ವಿದ್ಯುತ್ ಕಡಿತವಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಸೆಸ್ಕ್ ಸಿಬ್ಬಂದಿ ಮುರಿದು ಬಿದ್ದಿದ್ದ ವಿದ್ಯುತ್ ಪರಿವರ್ತಕವಿದ್ದ ಕಂಬವನ್ನು ತೆರವುಗೊಳಿಸಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸೆಸ್ಕ್ ಇಲಾಖೆಗೆ ಆಗಿರುವ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದು, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.