ಕಿಕ್ಕೇರಿ: ಗ್ರಾಮದ ಶ್ರೀನಿವಾಸ ರೈಸ್‌ಮಿಲ್ ಹಿಂಭಾಗದಲ್ಲಿ ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಗೆ ಶನಿವಾರ ಬೆಂಕಿ ಬಿದ್ದು ಅಪಾರ ನಷ್ಟವಾಗಿದೆ.
ರೈತ ಅಯ್ಯಂಗಾರಶೆಟ್ಟರ ಎಚ್.ಎನ್.ಕೃಷ್ಣಶೆಟ್ಟಿ ಎಂಬುವರ ಕಬ್ಬಿನ ಬೆಳೆ ನಾಶವಾಗಿದ್ದು, ಗದ್ದೆಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯ ಕಿಡಿ ಹಾರಿರುವುದೇ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಒಟ್ಟು 1.25 ಎಕರೆ ಪ್ರದೇಶದಲ್ಲಿ ಕೃಷ್ಣಶೆಟ್ಟಿ ಕಬ್ಬು ಬೆಳೆದಿದ್ದು, ನಾಲ್ಕೈದು ದಿನಗಳಲ್ಲಿ ಕಟಾವು ಮಾಡಬೇಕಿತ್ತು. ಶನಿವಾರ ಮಧ್ಯಾಹ್ನ ನೋಡು ನೋಡುತ್ತಿದ್ದಂತೆ ವಿದ್ಯುತ್ ತಂತಿಯಿಂದ ಬೆಂಕಿಯ ಕಿಡಿ ಹಾರಿದೆ. ಕ್ಷಣ ಮಾತ್ರದಲ್ಲಿ ಕಬ್ಬಿನ ತರಗಿಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದಿದೆ. ಗಾಳಿ ರಭಸಕ್ಕೆ ಪಕ್ಕದಲ್ಲಿದ್ದ ಬಿದಿರಿನ ಮೆಳೆಗೆ ಬೆಂಕಿ ವ್ಯಾಪಿಸಿದೆ.
ಬೆಂಕಿ ಜೋರಾಗಿ ಉರಿಯುತ್ತಿರುವುದನ್ನು ಕಂಡು ಸ್ಥಳಕ್ಕಾಗಮಿಸಿದ ಗ್ರಾಮದ ಜನತೆ, ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪರಿಣಾಮ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.