ಜಿಲ್ಲೆ

ಅಭ್ಯರ್ಥಿ ಕೈಯಲ್ಲಿರುವುದು 50 ಸಾವಿರ ರೂ.ಮಾತ್ರ..!

ಸದೇಶ್ ಕಾರ್ಮಾಡ್

ಲೋಕಸಭಾ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ 95 ಲಕ್ಷ ರೂ.ವರೆಗೆ ವೆಚ್ಚ ಮಾಡಬಹುದು. ಆದರೆ, ಚುನಾವಣಾ ಆಯೋಗ ನಿಗದಿ ಪಡಿಸಿರುವಷ್ಟು ಹಣವನ್ನು ಸಹ ಖರ್ಚು ಮಾಡಲು ಅಖಿಲ ಭಾರತ ಹಿಂದು ಮಹಾಭಾ ಪಕ್ಷದ ಅಭ್ಯರ್ಥಿ ಎ.ಎಸ್. ಸತೀಶ್ ಬಳಿ ಹಣವಿಲ್ಲ..!

ಸತೀಶ್ ಕೈಯಲ್ಲಿರುವುದು 50 ಸಾವಿರ ರೂ.ನಗದು ಮಾತ್ರ. ಒಟ್ಟು ಎರಡು ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಒಂದು ಖಾತೆಯಲ್ಲಿ 2 ಸಾವಿರ ರೂ., ಮತ್ತೊಂದು ಖಾತೆಯಲ್ಲಿ 7 ಸಾವಿರ ರೂ.ಗಳನ್ನು ಹೊಂದಿದ್ದಾರೆ. 57 ಸಾವಿರ ರೂ.ಮೊತ್ತದ ಸ್ಕೂಟರ್, 2 ಲಕ್ಷ ರೂ.ಮೌಲ್ಯದ ಕಾರನ್ನು ಹೊಂದಿದ್ದಾರೆ. ಪತ್ನಿ ಎ.ಎಲ್. ಆಶಾ 70 ಸಾವಿರ ರೂ.ಮೌಲ್ಯದ ಸ್ಕೂಟರ್, 1.50 ಲಕ್ಷ ರೂ.ಮೌಲ್ಯದ 25 ಗ್ರಾಂ ಚಿನ್ನವನ್ನು ಹೊಂದಿದ್ದಾರೆ. ಸತೀಶ್ ಒಟ್ಟು 3.14 ಲಕ್ಷ ರೂ.ಮೌಲ್ಯದ ಚರಾಸ್ತಿ, ಪತ್ನಿ 2.20 ಲಕ್ಷ ರೂ.ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇಬ್ಬರು ಬಳಿ ಸ್ಥಿರಾಸ್ತಿ ಇಲ್ಲ.

ಇಂದು ಒಂದು ನಾಮಪತ್ರ ಸ್ವೀಕಾರ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಖಿಲ ಭಾರತ ಹಿಂದು ಮಹಾಭಾ ಪಕ್ಷದ ಅಭ್ಯರ್ಥಿಯಾಗಿ ಎ.ಎಸ್. ಸತೀಶ್ ಶನಿವಾರ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ನಾಮಪತ್ರ ಸ್ವೀಕರಿಸಿದರು.

ಇದುವರೆಗೆ ಒಟ್ಟು ಮೂವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಗುರುವಾರ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ಪಕ್ಷದ ಟಿ.ಆರ್. ಸುನಿಲ್, ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಎಂ.ಎಸ್. ಪ್ರವೀಣ್ ನಾಮಪತ್ರ ಸಲ್ಲಿಸಿದ್ದಾರೆ.