ಕುಶಾಲನಗರ: ಪ್ರಿಂಟಿಂಗ್ ಪ್ರೆಸ್ ಉದ್ಯಮಿಯೊಬ್ಬರು ಏಕಾಏಕಿ ಕೃಷಿಯ ಬಗ್ಗೆ ಆಸಕ್ತಿ ಹೊಂದಿ ಇದೀಗ ಅಡಕೆ ಮತ್ತು ಕಾಫಿ ತೋಟ ಮಾಡಿದ್ದು, ಆ ಮೂಲಕ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.
ಸಮೀಪದ ಮಂತೆನಹಳ್ಳಿ ಗ್ರಾಮದ ನಿವಾಸಿ ಕೆ.ಎಸ್.ಅರುಣ್‌ಕುಮಾರ್ ಉದ್ಯಮದೊಂದಿಗೆ ಕೃಷಿಗೂ ಆದ್ಯತೆ ನೀಡುತ್ತಿದ್ದು, ಬಹು ಬೆಳೆಗಳನ್ನು ಬೆಳೆಯುವ ಮೂಲಕ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ತಂದೆ ಕೆ.ಟಿ.ಸುಬ್ಬಯ್ಯ ಅವರು ಖರೀದಿಸಿದ್ದ 15 ಎಕರೆ ಜಮೀನಿನಲ್ಲಿ ಭತ್ತದ ಕೃಷಿ ಮಾಡಲಾಗುತ್ತಿತ್ತು. ದಿನ ಕಳೆದಂತೆ ಕೆಲಸಗಾರರ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಗದ್ದೆಯನ್ನು ತೆಂಗಿನ ತೋಟವಾಗಿ ಮಾರ್ಪಾಡು ಮಾಡಲಾಯಿತು. ತಂದೆಯ ಕಾಲಾನಂತರ 2 ಎಕರೆ ಪ್ರದೇಶವನ್ನು ಗದ್ದೆ ಮಾಡಲಾಗಿ, ಉಳಿಕೆ ಪ್ರದೇಶದಲ್ಲಿ ಅಡಕೆ, ಕಾಫಿ ಬೆಳೆ ಬೆಳೆದಿದ್ದಾರೆ. ಅರುಣ್‌ಕುಮಾರ್ ಅವರ ಪುತ್ರ ಮಗ ನಿಖಿಲ್ ಎಂಬಿಎ ಮಾಡಿದ್ದರೂ ಪಾಲಕರೊಂದಿಗೆ ಇರಬೇಕೆಂಬ ಆಸೆಯಿಂದ ಕೈತುಂಬ ಸಂಬಳ ಸಿಗುವ ಅವಕಾಶವನ್ನು ತಿರಸ್ಕರಿಸಿ ತೋಟ ನೋಡಿಕೊಳ್ಳುತ್ತಿದ್ದಾನೆ. ಇನ್ನು ತೋಟದಲ್ಲಿ ಕೆಲಸದವರೊಂದಿಗೆ ಗುದ್ದಲಿ ಹಿಡಿದು ಕೆಲಸ ಮಾಡುವ ಮೂಲಕ ಕೃಷಿ ಕಾಯಕದಲ್ಲಿ ಖುಷಿ ಕಂಡುಕೊಂಡಿದ್ದಾನೆ.
ಕಾಫಿ, ಅಡಕೆ ತೋಟವನ್ನು ಇತ್ತೀಚೆಗೆ ಮಾಡಿರುವುದರಿಂದ ಅಲ್ಲಿಂದ ಇನ್ನೂ ಸಂಪಾದನೆ ಆರಂಭವಾಗಿಲ್ಲ. ಮುಂದಿನ ವರ್ಷದಲ್ಲಿ ಅಡಕೆ ಮೊದಲ ಫಸಲು ಬರುವ ನಿರೀಕ್ಷೆ ಇದೆ. ಇನ್ನು ರೊಬಸ್ಟಾ ಕಾಫಿಯನ್ನು ಮೊದಲ ಬಾರಿಗೆ 15 ಚೀಲ ಬೆಳೆದು ಮಾರಾಟ ಮಾಡುವ ಮೂಲಕ ಒಂದಷ್ಟು ಆದಾಯ ಕಂಡಿದ್ದಾರೆ.
ಹೈನುಗಾರಿಕೆ: ಕೃಷಿಯೊಂದಿಗೆ ಅರುಣ್‌ಕುಮಾರ್ ತೋಟದ ಮನೆಯಲ್ಲಿ ನಿತ್ಯ ಆದಾಯಕ್ಕಾಗಿ 4 ಹಸುಗಳನ್ನೂ ಸಾಕಿದ್ದಾರೆ. ಇವುಗಳಿಂದ ದಿನವೊಂದಕ್ಕೆ ಕನಿಷ್ಠ 25 ಲೀಟರ್ ಹಾಲು ಮಾರಾಟ ಮಾಡುತ್ತಾರೆ. ಹಸುಗಳ ಮೇವಿಗೆಂದು ತೋಟದಲ್ಲೇ ಹಸಿರು ಹುಲ್ಲು ಬೆಳೆಯಲಾಗುತ್ತಿದ್ದು, ಹಸುವಿನ ಗೊಬ್ಬರವನ್ನು ತರಕಾರಿ ಬೆಳೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಸಾವಯವ ತರಕಾರಿಯನ್ನು ತೋಟದಲ್ಲೇ ಬೆಳೆದು ತಮ್ಮ ಮನೆ ಸೇರಿದಂತೆ ಸಹೋದರಿಯರ ಮನೆಗೂ ತರಕಾರಿ ಸರಬರಾಜು ಮಾಡುತ್ತಿದ್ದಾರೆ.
ನಾಟಿ ಕೋಳಿ ಸಾಕಣೆ: ಹೈನುಗಾರಿಕೆಯಿಂದ ಒಂದಷ್ಟು ಲಾಭ ಕಂಡುಕೊಂಡಿರುವ ಅರುಣ್‌ಕುಮಾರ್ ನಾಟಿ ಕೋಳಿಗಳನ್ನೂ ಸಾಕುತ್ತಿದ್ದಾರೆ. ತಾಯಿ ಕೋಳಿಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆಯಿದ್ದು, ಸಾಮಾನ್ಯ ಕೋಳಿಗಿಂತ ನಾಟಿ ಕೋಳಿ ದುಬಾರಿ. ಕೋಳಿಯಿಂದ ಆರ್ಥಿಕವಾಗಿ ಸದೃಢರಾಗಿರುವ ಅಉರಣ್, ನಾಟಿ ಕೋಳಿ ಸಾಕಲು ಕಷ್ಟವೇನಿಲ್ಲ ಎನದ್ನುತ್ತಾರೆ. ದಿನಂ ಪ್ರತಿ ಕೋಳಿಗಳನ್ನು ಹೊರಗೆ ಬಿಟ್ಟರೆ ಸಂಜೆ ತನಕ ತೋಟವನ್ನು ಸುತ್ತಿಕೊಂಡು ಸಂಜೆ ಮನೆ ಬಳಿ ಬರುತ್ತವೆ. ಬಂದ ನಂತರ ಅವುಗಳನ್ನು ಹಾವು ಇತರ ಪ್ರಾಣಿಗಳಿಂದ ಸುರಕ್ಷತೆಗಾಗಿ ಕುಕ್ಕೆಯಲ್ಲಿ ಮುಚ್ಚಿ ಇಡುವ ಮೂಲಕ ಅವುಗಳ ಸುರಕ್ಷತೆಗೆ ಆದ್ಯತೆ ನೀಡಿದ್ದಾರೆ.
ಸಮೃದ್ಧ ನೀರು; ಜಮೀನು ಪಕ್ಕದಲ್ಲೇ ದೊಡ್ಡ ಸರ್ಕಾರಿ ಕೆರೆ ಇದೆ. ಇದರಲ್ಲಿ ವರ್ಷ ಪೂರ್ತಿ ನೀರು ಇರಲಿದ್ದು, ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಇದರ ಸದುಪಯೋಗ ಪಡೆದುಕೊಂಡಿರುವ ಅರುಣ್, ಅರ್ಧ ಎಕರೆ ಜಾಗದಲ್ಲಿ ಕೆರೆ ನಿರ್ಮಾಣ ಮಾಡಿದ್ದಾರೆ. ಅಲ್ಲಿ ಮೀನುಗಳನ್ನು ಸಾಕಣೆ ಮಾಡುತ್ತಿದ್ದಾರೆ.
ಕೃಷಿ ಚಟುವಟಿಕೆಗೆಂದು ತೋಟದಲ್ಲಿ 2 ಬೋರ್‌ವೆಲ್ ತೆಗೆಸಲಾಗಿದ್ದು, 3 ರಿಂದ 4 ಇಂಚು ನೀರು ಬರುತ್ತದೆ. ವಿದ್ಯುತ್ ಸಮಸ್ಯೆ ಹೆಚ್ಚಿರುವುದರಿಂದ ಮನೆ ಮತ್ತು ಒಂದು ಬೋರ್‌ವೆಲ್ಗೆ ಸೋಲಾರ್ ವ್ಯವಸ್ಥೆ ಮಾಡಿಕೊಂಡಿದ್ದರೆ. ಈ ಭಾಗದಲ್ಲಿ ಮುಂಜಾನೆ 3 ಗಂಟೆ ಮತ್ತು ಸಂಜೆ 3 ಗಂಟೆ ಮಾತ್ರ ವಿದ್ಯುತ್ ಸಂಪರ್ಕ ಇರಲಿದ್ದು, ಸುರಕ್ಷತಾ ದೃಷ್ಟಿಯಿಂದ ಸೋಲಾರ್‌ಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ.
ತಂದೆ ಬಹಳ ಕಷ್ಟಪಟ್ಟು ಗದ್ದೆ ಮಾಡಿಸುತ್ತಿದ್ದರು. ನಂತರ ನಿಧಾನವಾಗಿ ತೆಂಗು ನೆಡಲು ಆರಂಭಿಸಿದರು. ತಂದೆ ಕಾಲಾನಂತರ ನಾನು ಅಡಕೆ ಮತ್ತು ಕಾಫಿ ತೋಟ ಮಾಡಿದ್ದೇನೆ. ತೋಟದ ಅಭಿವೃದ್ಧಿಗೆ ಪತ್ನಿ ಯಶೋದಾ ಮತ್ತು ಮಗ ನಿಖಿಲ್ ಬೆನ್ನುಲುಬಾಗಿ ನಿಂತಿದ್ದಾರೆ. ಎಂಬಿಎ ಓದಿರುವ ಮಗ ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡಿರುವುದರ ಜತೆಗೆ ವ್ಯಾಪಾರದಲ್ಲಿ ತನ್ನ ಜ್ಞಾನವನ್ನು ಉಪಯೋಗಿಸಿ ನನ್ನ ಸಹಾಯಕ್ಕೆ ನಿಂತಿದ್ದಾನೆ.
ಕೆ.ಎಸ್.ಅರುಣ್‌ಕುಮಾರ್ ಕೃಷಿಕ, ಕುಶಾಲನಗರ