ಸುಂಟಿಕೊಪ್ಪ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ನಿಂತಿರುವ ವಿದ್ಯಾರ್ಥಿಗಳಯ, ಸಾರ್ವಜನಿಕರು. 
ಜಿಲ್ಲೆ

ನಿಗದಿತ ಸಮಯಕ್ಕೆ ಬಾರದ ಬಸ್

ಅಭಿನಯ್ ಎಚ್.ಎಂ

ಸುಂಟಿಕೊಪ್ಪ: ಪಟ್ಟಣದಲ್ಲಿ ಹಾದುಹೋಗಿರುವ ಮೈಸೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ನೂರಾರು ಸರ್ಕಾರಿ ಬಸ್‌ಗಳು ಸಂಚರಿಸಿದರೂ ನಿಗದಿತ ಸಮಯಕ್ಕೆ ಬಸ್‌ಗಳು ಬಾರದ ಹಿನ್ನೆಲೆಯಲ್ಲಿ ನಿತ್ಯ ಕೆಲಸ ಕಾರ್ಯಗಳಿಗೆ ಹೋಗುವವರು ಹಾಗೂ ವಿದ್ಯಾಭ್ಯಾಸಕ್ಕೆ ತೆರಳುವ ಮಕ್ಕಳು ಪರದಾಡುವಂತಾಗಿದೆ.

ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜತೆಗೆ, ಅತ್ಯಂತ ದೊಡ್ಡ ಪಂಚಾಯಿತಿಗಳಲ್ಲಿ ಒಂದಾಗಿದೆ. ಪಟ್ಟಣದಲ್ಲಿ ಹಲವು ನೂತನ ಬಡಾವಣೆಗಳಿದ್ದು, ವಾಸದ ಮನೆಗಳು ನಿರ್ಮಾಣಗೊಂಡು ದಿನದಿಂದ ದಿನಕ್ಕೆ ಜನ ಸಂಖ್ಯೆ ಬೆಳೆಯುತ್ತಿದೆ.

ಸುಂಟಿಕೊಪ್ಪ ಹೋಬಳಿ ಕೇಂದ್ರವಾಗಿದ್ದು, ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ, ಹೆರೂರು, ಕಲ್ಲೂರು, ಹರದೂರು, ಗರಗಂದೂರು, ಭೂತನಕಾಡು ಭಾಗಗಳ ಜನತೆಗೆ ಪಟ್ಟಣವೇ ಸಂಪರ್ಕ ಕೇಂದ್ರವಾಗಿದೆ. ಆದರೆ ಇಲ್ಲಿ ಮೂಲಸೌಲಭ್ಯ ಎಂಬುದು ಮರಿಯಾಚಿಕೆಯಾಗಿದೆ. ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಹಾಗೂ ಮಕ್ಕಳು ವಿದ್ಯಾಭ್ಯಾಸಕ್ಕೆ ತಾಲೂಕು, ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ತೆರಳಬೇಕಾದರೆ ಸುಂಟಿಕೊಪ್ಪಕ್ಕೆ ಬರಬೇಕಿದೆ. ಹೀಗೆ ಬಂದವರು ರಾಷ್ಟ್ರೀಯ ಹೆದ್ದಾರಿ ಬದಿಯ ಅಂಗಡಿ ಮಳಿಗೆ ಮುಂಭಾಗ ನಿಂತು ಬಸ್ ಹತ್ತಬೇಕಾಗಿದೆ.

ಎರಡು ದಶಕಗಳಿಂದ ಕುಶಾಲನಗರವನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಮಡಿಕೇರಿ-ಪುತ್ತೂರು-ಮಂಗಳೂರು-ತಲಕಾವೇರಿ-ಭಾಗಮಂಡಲ-ವಿರಾಜಪೇಟೆ-ಗೋಣಿಕೊಪ್ಪ ಹಾಗೂ ಸೋಮವಾರಪೇಟೆ ಭಾಗಕ್ಕೆ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ. ಎರಡು ದಶಕಗಳ ಹಿಂದೆ ಈಗಿನಷ್ಟು ಶಾಲಾ-ಕಾಲೇಜುಗಳು ಇರಲಿಲ್ಲ. ಜನಸಂಖ್ಯೆ ಮತ್ತು ಪಟ್ಟಣ ಬೆಳೆದಿರಲಿಲ್ಲ. ಆದರೆ ಇದೀಗ ಶಾಲಾ ಕಾಲೇಜುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಬಸ್‌ಗಳ ಸಂಖ್ಯೆ ಏರಿಕೆಯಾಗಿಲ್ಲ ಎಂಬುದು ದುರಂತ.

ಸರ್ಕಾರದ ನಾರಿಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಜನರು ತುಂಬಿ ತುಳುಕುತ್ತಿದ್ದು, ಅನೇಕ ಸಂದರ್ಭಗಳಲ್ಲಿ ಸುಂಟಿಕೊಪ್ಪದಂತಹ ಪ್ರಮುಖ ಸ್ಥಳದಲ್ಲಿ ಬಸ್ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರು ಮತ್ತು ಸಾರಿಗೆ ಬಸ್‌ಗಳ ನಡುವೆ ವಾಗ್ವಾದ ನಡೆಯುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಪೂರಕವೆಂಬಂತೆ ಅ.6ರಂದು ಮಕ್ಕಳು ಹಾಗೂ ಇತರರು ಶಾಲಾ-ಕಾಲೇಜು, ಕೆಲಸ ಕಾರ್ಯಗಳಿಗೆ ತೆರಳಲಾಗದೆ ಮನೆಗೆ ವಾಪಸ್ ಹೋಗಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗಸ್ಥರನ್ನು ಹೊರತುಪಡಿಸಿ ಶಾಲಾ ಕಾಲೇಜು ಮಕ್ಕಳ ಪರಿಸ್ಥಿತಿಯನ್ನು ನೋಡಿದಾಗ ಹಾಜರಾತಿ ಕೊರತೆ, ವಿಶೇಷ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದಿರುವುದರ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಕಳವಳ ವ್ಯಕ್ತಪಡಿಸಿದ್ದು, ತಮ್ಮದಲ್ಲದ ತಪ್ಪಿಗೆ ಮಕ್ಕಳು ಅನಗತ್ಯ ಒತ್ತಡ ಎದುರಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ನಿಗದಿತ ಸಮಯಕ್ಕೆ ಬಸ್ ಬಾರದಿದ್ದಲ್ಲಿ ಶಾಲಾ-ಕಾಲೇಜು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗಕ್ಕೆ ಹೋಗುವವರು ಅನೇಕ ಸಂದರ್ಭದಲ್ಲಿ ಸಂಕಷ್ಟಕ್ಕೆ ಗುರಿಯಾಗಬೇಕಿದೆ. ಸರ್ಕಾರಿ ಬಸ್‌ಗಳನ್ನು ಅವಲಂಬಿಸಿರುವ ಬಡ ಮತ್ತು ಮಧ್ಯಮ ವರ್ಗದ ಜನರು ಸಾರಿಗೆ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಸವನಹಳ್ಳಿ ಸಮೀಪ ಡಿಪೋ ನಿರ್ಮಾಣ ಆಗಲಿದೆಯಾದರೂ ಬಸ್ ಸಮಸ್ಯೆ ಪರಿಹಾರಕ್ಕೆ 5 ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಪ್ರಯಾಣಿಕರ ಗೋಳು ಕೇಳುವವರು ಯಾರೆಂಬುದು ಪ್ರಶ್ನೆಯಾಗಿದೆ.

ಸೋಮವಾರ ಬಂತೆಂದರೆ ಬಸ್‌ನಲ್ಲಿ ಸಂಚರಿಸಲು ಸುಂಟಿಕೊಪ್ಪ ಜನತೆ ಹರಸಾಹಸ ಪಡಬೇಕಿದೆ. ಬೆಳಗಿನ ಸಂದರ್ಭ ಬರುವ ಸಾರಿಗೆ ಬಸ್‌ಗಳಲ್ಲಿ ಕಿಕ್ಕಿರಿದು ತುಂಬಿರುವ ಜನರಿಂದಾಗಿ ಮಕ್ಕಳು ಮತ್ತು ಮಹಿಳೆಯರು ಪ್ರಯಾಣಿಸಲು ಆಗುವುದಿಲ್ಲ. ಜೀವದ ಹಂಗು ತೊರೆದು ಉಸಿರುಗಟ್ಟಿದ ವಾತಾವರಣದಲ್ಲಿ ಪ್ರಯಾಣಿಸಬೇಕಿದೆ. ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಲಿ ಎಂಬುದು ಪಾಲಕ ಇಬ್ರಾಹಿಂ ಸುಲ್ತಾನ್ ಅವರ ಒತ್ತಾಯವಾಗಿದೆ.

ಈ ಸಮಸ್ಯೆ ಇಂದು ಅಥವಾ ನಿನ್ನೆಯದಲ್ಲ. ದಶಕಗಳಿಂದಲೂ ಸಮಸ್ಯೆ ಜೀವಂತಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸಂಬಂಧಿಸಿದವರಿಗೆ ಮನವಿ ಸಲ್ಲಿಸಲಾಗಿದೆಯಾದರೂ ಯಾವುದೇ ಅಧಿಕಾರಿ ಹಾಗೂ ಜನಪ್ರತಿನಿಧಿ ಇತ್ತ ಗಮನಹರಿಸಿಲ್ಲ. ಇವರ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಕೂಗು ಅರಣ್ಯರೋದನವಾಗಿಯೇ ಉಳಿದುಕೊಂಡಿದೆ.

ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೂರದ ಶಾಲೆ, ಕಾಲೇಜಿಗೆ ಸೇರಿಸಲಾಗಿದ್ದು, ನಿಗದಿತ ಸಮಯಕ್ಕೆ ಬಸ್ ಬಾರದ ಹಿನ್ನೆಲೆಯಲ್ಲಿ ಪಿಯು ವಿದ್ಯಾರ್ಥಿಗಳು ಪಾಠ-ಪ್ರವಚನದಿಂದ ವಂಚಿತರಾಗುತ್ತಿದ್ದಾರೆ. ಪರಿಣಾಮ, ಭವಿಷ್ಯದಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇದೆ. ಸಂಬಂಧಿಸಿದ ಡಿಪೋ ವ್ಯವಸ್ಥಾಪಕರು ನಿಗದಿತ ಸಮಯಕ್ಕೆ ಬಸ್‌ಗಳು ಸಂಚರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.
ಶಬ್ಬೀರ್ ಪಾಲಕ

ಸೋಮವಾರ ಸೇರಿದಂತೆ ಇತರ ದಿನಗಳಲ್ಲಿ ಮುಂಜಾನೆ ವೇಳೆ ಮಡಿಕೇರಿ ಭಾಗಕ್ಕೆ ತೆರಳಲು ಆಗುವುದಿಲ್ಲ. ಸರ್ಕಾರಿ, ಖಾಸಗಿ ಕೆಲಸ ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಭಾಗದ ಜನತೆಗೆ ತೊಂದರೆ ಉಂಟಾಗುತ್ತಿದೆ. ಸಮಸ್ಯೆ ಗಂಭೀರವಾಗಿದ್ದು, ಗ್ರಾಪಂ ವತಿಯಿಂದ ಸಾರಿಗೆ ಸಂಸ್ಥೆಯ ಮಡಿಕೇರಿ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಆ ಮೂಲಕ ಹೆಚ್ಚಿನ ಬಸ್ ಸಂಚಾರ ಕಲ್ಪಿಸುವಂತೆ ಕೋರಲಾಗುವುದು.
ಪಿ.ಆರ್.ಸುನಿಲ್‌ಕುಮಾರ್ ಅಧ್ಯಕ್ಷ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ