ಮಾಗಡಿ : ನಿಜಶರಣ ಅಂಬಿಗರ ಚೌಡಯ್ಯ ಅವರ ಕಂಚಿನ ಪ್ರತಿಮೆಯನ್ನು ವಿಧಾನ ಸೌಧದ ಮುಂದೆ ಸ್ಥಾಪಿಸಬೇಕೆಂದು ಕೆಪಿಸಿಸಿ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಬೆಸ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ವಿ.ಸೀತಾರಾಮ್ ಸರ್ಕಾರವನ್ನು ಒತ್ತಾಯಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಬೆಸ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸವದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬೆಸ್ತ ಸಮುದಾಯದ ನಿಗಮಕ್ಕೆ 5 ಕೋಟಿ ರೂ. ನೀಡುತ್ತಿದ್ದು, ಇದನ್ನು 30 ಕೋಟಿ ರೂ. ಗೆ ಏರಿಸಬೇಕೆಂದು ಒತ್ತಾಯಿಸಿದರು.
ಅಂಬಿಗರ ಚೌಡಯ್ಯ ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು.ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು. ಇವರ ವಚನಗಳಿಂದ ಗಂಗಾಮತಸ್ಥ ಸಮಾಜದವರು ರಾಜ್ಯದಲ್ಲಿ ಒಂದಾಗುವ ಶಕ್ತಿ ಬಂದಿದೆ. ಅವರ ತತ್ವಸಿದ್ದಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆಯಿಂದ ಬದುಕೋಣ ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಡಿ.ಪಿ.ಶರತ್ ಕುಮಾರ್ ಮಾತನಾಡಿ, ಕ್ರಾಂತಿಕಾರಿ ಬಸವಣ್ಣ ಪ್ರಪಂಚದ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಶೋಷಿತ ಸಮಾಜ ಅನುಭವಿಸಿದ ನೋವು ಮುಂದಿನ ಪೀಳಿಗೆ ಅನುಭವಿಸಬಾರದು ಎಂದು ಅಸ್ಪ್ರಶ್ಯತೆಯ ಕಂದಾಚಾರವನ್ನು ಅಳಿಸಿ, ಸಮಾನತೆಯ ಸಮಾಜವನ್ನು ನಿರ್ಮಿಸಲು ಅನೇಕ ಹೋರಾಟವನ್ನು ಮಾಡಿದ ದೀಮಂತ ನಾಯಕರಾದ ಕ್ರಾಂತಿಕಾರಿ ಬಸವಣ್ಣ ಅವರ ಅನುಭವ ಮಂಟಪದಲ್ಲಿ ನಿಜಶರಣ ಶರಣರು ಒಬ್ಬರು. ವಚನ ಸಾಹಿತ್ಯದ ಮೂಲಕ ರಚಿಸಿರುವ ವಚನಗಳು ಇಂದಿಗೂ ಪ್ರಸ್ತುತವಾಗಿದೆ. ಇಂದಿನ ಪೀಳಿಗೆ ಅವರು ಹಾಕಿದ ಅಡಿಪಾಯದ ತತ್ವಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ಮುನ್ನೆಸಿಕೊಂಡು ಬರಬೇಕೆಂದು ಕರೆ ನೀಡಿದರು.ತಾಪಂ ಮಾಜಿ ಸದಸ್ಯ ಸಿ.ಜಯರಾಮ್ ಮಾತನಾಡಿ, ಅಂಬಿಗರ ಚೌಡಯ್ಯ ವಚನದ ಮೂಲಕ ನಾಡಿಗೆ ತಮ್ಮದೇ ಆದ ಅನನ್ಯ ಕೊಡುಗೆ ನೀಡಿದ್ದಾರೆ. ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್.ನಂಜಯ್ಯ, ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಆರ್.ರಾಮಕೃಷ್ಣಯ್ಯ, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ.ಜಯರಾಮ್, ದೊಡ್ಡಿ ಲಕ್ಷ್ಮಣ್ ರಮೇಶ್ ಮಾತನಾಡಿದರು.
ವಿವಿಧ ರಂಗದಲ್ಲಿ ಸೇವೆಸಲ್ಲಿಸಿದ ಸಮಾಜದ ಮುಖಂಡರನ್ನು ಸನ್ಮಾನಿಸಿದರು.
ನೇತೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಪಿ.ವಿ.ಶಾಂತರಾಜ್, ಪುರಸಭೆ ಮಾಜಿ ಸದಸ್ಯ ಗಂಗಣ್ಣ, ತಿರುಮಲೆ ಜಯರಾಮ್, ಆಗಲಕೋಟೆ ಗ್ರಾಪಂ ಸದಸ್ಯೆ ಸಾವಿತ್ರಮ್ಮ ಲಿಂಗೇಶ್ ಕುಮಾರ್, ಪಿ.ಸಿ.ಪಾಳ್ಯದ ಶಿವಣ್ಣ, ಜ್ಯೊತಿಪಾಳ್ಯದ ರಾಮಣ್ಣ, ಅಗ್ನಿಶಾಮಕ ದಳದ ರೇವಣ್ಣ, ಗುಡ್ಡಹಳ್ಳಿ ತಮ್ಮಯ್ಯ, ಒಕ್ಕಲಿಗರ ಸಂಘದ ನಿರ್ದೇಶಕ ಈರಣ್ಣ ನಾಗರಾಜು, ಬೋವಿ ಸಮಾಜದ ಅಧ್ಯಕ್ಷ ಬಿ.ಟಿ.ವೆಂಕಟೇಶ್, ಕುಸುಮಾ ಹೊನ್ನರಾಜ್, ಶಿವಲಿಂಗಯ್ಯ, ಉಪ ತಹಸೀಲ್ದಾರ್ ಪ್ರಭಾಕರ್, ಗ್ರಾಮಲೆಕ್ಕಾಧಿಕಾರಿ ಚಂದ್ರಶೇಖರ್, ಎಪಿಎಂಸಿ ಮಾಜಿ ನಿರ್ದೇಶಕ ಜಯಕುಮಾರ್, ರೈತಮುಖಂಡ ಜುಟ್ನಹಳ್ಳಿ ಆರ್. ದಿನೇಶ್, ನಾರಸಂದ್ರ ಸುರೇಶ್, ಸಿದ್ದಪ್ಪಾಜಿ ಇತರರು ಇದ್ದರು.