ಜಿಲ್ಲೆ

ಕುಸಿಯುವ ಭೀತಿಯಲ್ಲಿ ಸೇತುವೆ

Avinash R

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ದಣ ಕನ್ನಡ ಜಿಲ್ಲೆಯ ಗಡಿ ಭಾಗ ಮೂಲ್ಕಿಯ ಮಾನಂಪಾಡಿ ಕಕ್ವ ಒಳ ರಸ್ತೆಯಿಂದ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಮೂಲಕ ಉಡುಪಿ ಜಿಲ್ಲೆಗೆ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು, ಮರಳು ಸಾಗಿಸುವ ಟಿಪ್ಪರ್​ ಲಾರಿಗಳ ಭಾರದಿಂದ ಗ್ರಾಮೀಣ ಭಾಗದ ಜೀವನಾಡಿಯಾದ ಕಿರು ಸೇತುವೆ ಹಾಗೂ ಕಾಂಕ್ರೀಟ್​ ರಸ್ತೆಗಳು ಕುಸಿಯುವ ಭೀತಿ ಎದುರಿಸುತ್ತಿವೆ. ದಣ ಕನ್ನಡ ಜಿಲ್ಲೆಯ ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಬಪ್ಪನಾಡು ದೇವಸ್ಥಾನದ ದ್ವಾರದ ಎದುರು ಒಳ ರಸ್ತೆಯ ಮೂಲಕ ರಾತ್ರಿ ಟಿಪ್ಪರ್​ ಮೂಲಕ ಅಕ್ರಮವಾಗಿ ಮರಳು ಸಾಗಾಟ ಆರಂಭಗೊಂಡಿದೆ. ಈ ಅಕ್ರಮ ಮರಳು ಸಾಗಾಟದಿಂದ ಇತ್ತೀಚೆಗೆ ನಿರ್ಮಿಸಲಾದ 3 ಕೋಟಿ ರೂ. ವೆಚ್ಚದ ಕಾಂಕ್ರೀಟ್​ ರಸ್ತೆ ಹಾಗೂ ಅವರಾಲುಮಟ್ಟು, ಕೊಕ್ರಾಣಿ ಮತ್ತು ಕಕ್ವ ಸೇತುವೆಗಳು ಕುಸಿಯುವ ಭೀತಿ ಎದುರಿಸುತ್ತಿವೆ. ಹೀಗೆ ಮುಂದುವರಿದಲ್ಲಿ ಇಲ್ಲಿನ ಜನತೆಗೆ ಮೂಲ್ಕಿ ಪೇಟೆಯ ಸಂಪರ್ಕ ಕಡಿದುಕೊಳ್ಳುವ ಸಂಕಷ್ಟ ಎದುರಾಗಲಿದೆ. ಹಿಂದೆಯೂ ಮರಳು ಸಾಗಾಟದಿಂದ ರಸ್ತೆಗಳು ಸಂಪೂರ್ಣ ಕುಸಿದು ಯಾವುದೇ ರಿಾ ಅಥವಾ ವಾಹನಗಳು ಬಾರದಿರುವ ಸಂದರ್ಭ ಇಲ್ಲಿನ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಶಾಸಕ ಉಮಾನಾಥ ಕೋಟ್ಯಾನ್​ ಮುತುರ್ವರ್ಜಿಯಲ್ಲಿ ಗುಣಮಟ್ಟದ ಕಾಂಕ್ರೀಟ್​ ರಸ್ತೆ ನಿರ್ಮಿಸಲಾಗಿತ್ತು. ಸ್ಥಳಿಯರಾದ ಉದಯ ಅಮೀನ್​ ಮಟ್ಟು ಮಾಹಿತಿ ನೀಡಿ, ಇತ್ತೀಚೆಗೆ ಮರಳು ಸಾಗಾಟ ಅಧಿಕಗೊಂಡಿದೆ. ರಸ್ತೆಗಳು ಬಿರುಕು ಬಿಟ್ಟು ಕುಸಿಯಲಾರಂಭಿಸಿದೆ. ಮೂಲ್ಕಿ ಪೊಲೀಸರು ಮತ್ತು ಗಣಿ ವಿಜ್ಞಾನ ಇಲಾಖೆ ಅಕ್ರಮ ಮರಳು ಸಾಗಾಟ ನಿಲ್ಲಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಕ್ರಮ ಮರಳು ಸಾಗಾಟದ ವಿರುದ್ಧ ಪಂಚಾಯಿತಿ ವಾರ್ಡ್​ ಸಭೆಯಲ್ಲಿ ರ್ನಿಣಯ ಮಾಡಿದ್ದು ಮೂಲ್ಕಿ ತಹಸೀಲ್ದಾರ್​ಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗೆ ಮುಂದುವರಿದರೆ ಸಂಪೂರ್ಣ ರಸ್ತೆ ನಾಶವಾಗಿ ಜನರಿಗೆ ಸಮಸ್ಯೆಯಾಗಲಿದೆ. ಜಯಕುಮಾರ್​ ಮಟ್ಟು, ಸದಸ್ಯರು, ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ