ಮೈಸೂರಿನ ಟ್ರಿಣ್ ಟ್ರಿಣ್ ಸೈಕಲ್ 
ಜಿಲ್ಲೆ

ಒಂಬತ್ತು ವರ್ಷಗಳ ಹಸಿರು ಪಯಣಕ್ಕೆ ಬ್ರೇಕ್

ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಸೇವೆ ಸ್ಥಗಿತ

ಸದೇಶ್ ಕಾರ್ಮಾಡ್ ಮೈಸೂರು

ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮೈಸೂರಿನಲ್ಲಿ ಆರಂಭಿಸಲಾಗಿದ್ದ ಸಾರ್ವಜನಿಕ ಸೈಕಲ್ ಹಂಚಿಕೆ ವ್ಯವಸ್ಥೆ ‘ಟ್ರಿಣ್ ಟ್ರಿಣ್’ ಸ್ಥಗಿತಗೊಂಡಿದೆ. ಸುಮಾರು ಒಂಬತ್ತು ವರ್ಷಗಳ ಕಾಲ ಮೈಸೂರಿನ ಜನರಿಗೆ ಕಡಿಮೆ ವೆಚ್ಚದ, ಆರೋಗ್ಯಕರ ಮತ್ತು ಪರಿಸರ ಸ್ನೇಹಿ ಸಾರಿಗೆ ಆಯ್ಕೆಯಾಗಿದ್ದ ಈ ಸೇವೆಯು ಕಾರ್ಯಾಚರಣೆ ನಿಲ್ಲಿಸಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದರೂ ನಿರ್ವಹಣಾ ವೆಚ್ಚದ ಹೊರೆಯನ್ನು ಭರಿಸಲಾಗದೆ ಸೇವೆ ಸ್ಥಗಿತಗೊಳಿಸಲಾಗಿದೆ.

ಮೈಸೂರನ್ನು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯ ಮಾದರಿ ನಗರವನ್ನಾಗಿ ರೂಪಿಸುವ ಆಶಯದೊಂದಿಗೆ 2017ರ ಜೂನ್ 4ರಂದು ನಗರ ಪಾಲಿಕೆ ಹಾಗೂ ನಗರ ಭೂ ಸಾರಿಗೆ ನಿರ್ದೇಶನಾಲಯ ಸಹಯೋಗದಲ್ಲಿ ಟ್ರಿಣ್ ಟ್ರಿಣ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಸಾರ್ವಜನಿಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ನಗರದ ವಿವಿಧೆಡೆ ಸೈಕಲ್ ಪಡೆದು, ಪ್ರಯಾಣ ಮುಗಿದ ಬಳಿಕ ಮತ್ತೊಂದು ನಿಲ್ದಾಣದಲ್ಲಿ ಹಿಂದಿರುಗಿಸುವ ವ್ಯವಸ್ಥೆ ಇದಾಗಿತ್ತು.

ಆರಂಭದಲ್ಲಿ ಸಾಮಾನ್ಯ ಸೈಕಲ್‌ಗಳೊಂದಿಗೆ ಪ್ರಾರಂಭವಾದ ಈ ಯೋಜನೆ ನಂತರ ತಂತ್ರಜ್ಞಾನದ ನೆರವಿನಿಂದ ಮತ್ತಷ್ಟು ಆಧುನಿಕ ರೂಪ ಪಡೆದುಕೊಂಡಿತು. 2023ರಲ್ಲಿ ಹೊಸ ಸಂಸ್ಥೆಗೆ ನಿರ್ವಹಣೆಯ ಜವಾಬ್ದಾರಿ ವಹಿಸಿದ ಬಳಿಕ ಪೆಡಲ್ ಸಹಾಯದ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಪರಿಚಯಿಸಲಾಯಿತು. ಇದರಿಂದ ಏರು ರಸ್ತೆಗಳಲ್ಲಿಯೂ ಸುಲಭವಾಗಿ ಸೈಕಲ್ ತುಳಿಯಲು ಸಾಧ್ಯವಾಯಿತು.

48 ಸ್ಥಳಗಳಲ್ಲಿ ಸೈಕಲ್ ನಿಲ್ದಾಣ:

ನಗರದ ಜನರಿಗೆ ಸುಲಭವಾಗಿ ಸೈಕಲ್ ಲಭ್ಯವಾಗುವಂತೆ ಅರಮನೆ, ರೈಲು ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕುಕ್ಕರಹಳ್ಳಿ ಕೆರೆ, ಜಗನ್ಮೋಹನ ಅರಮನೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸೈಕಲ್ ನಿಲುಗಡೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಒಟ್ಟಾರೆ ನಗರದ 48 ಸ್ಥಳಗಳಲ್ಲಿ ನಿಲ್ದಾಣಗಳ ಜಾಲ ರೂಪಿಸಲಾಗಿತ್ತು.

ಮೊಬೈಲ್ ಅಪ್ಲಿಕೇಷನ್ ಹಾಗೂ ಡಿಜಿಟಲ್ ಲಾಕಿಂಗ್ ವ್ಯವಸ್ಥೆಯ ಮೂಲಕ ಸೈಕಲ್‌ಗಳನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. ಬಳಕೆದಾರರು ತಮಗೆ ಅನುಕೂಲವಾದ ಸ್ಥಳದಿಂದ ಸೈಕಲ್ ಪಡೆದು, ಪ್ರಯಾಣ ಮುಗಿದ ಬಳಿಕ ನಿಗದಿತ ಕೇಂದ್ರಗಳಲ್ಲಿ ಹಿಂತಿರುಗಿಸಬಹುದಾಗಿತ್ತು. ಸೈಕಲ್‌ಗಳನ್ನು ಗಂಟೆ, ದಿನ ಹಾಗೂ ದೀರ್ಘಾವಧಿಗೆ ಬಾಡಿಗೆ ಪಡೆಯುವ ಅವಕಾಶವೂ ಇದ್ದುದರಿಂದ ವಿವಿಧ ವರ್ಗದ ಜನರಿಗೆ ಈ ವ್ಯವಸ್ಥೆ ಅನುಕೂಲಕರವಾಗಿತ್ತು.

ಟ್ರಿಣ್ ಟ್ರಿಣ್ ಸೇವೆ ಕೇವಲ ಸೈಕಲ್ ಸವಾರಿಯ ಆಸಕ್ತರಿಗೆ ಸೀಮಿತವಾಗಿರಲಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಸಣ್ಣ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು, ಬೆಳಗಿನ ವಾಯುವಿಹಾರಕ್ಕೆ ತೆರಳುವವರು ಹಾಗೂ ಪ್ರವಾಸಿಗರು ಈ ಸೇವೆಯನ್ನು ಬಳಸುತ್ತಿದ್ದರು. ಆನ್‌ಲೈನ್ ಫುಡ್ ಡೆಲಿವರಿಗೂ ಕೆಲವರು ಈ ಸೈಕಲ್‌ಅನ್ನು ಬಳಸುತ್ತಿದ್ದರು.

ವಿಶೇಷವಾಗಿ ಕಡಿಮೆ ದೂರದ ಪ್ರಯಾಣಕ್ಕಾಗಿ ಆಟೋ ಅಥವಾ ದ್ವಿಚಕ್ರ ವಾಹನ ಅವಲಂಬಿಸುವ ಬದಲು ಸೈಕಲ್ ಬಳಸಲು ಇದು ಅವಕಾಶ ಕಲ್ಪಿಸಿತ್ತು. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಅರಮನೆ, ಮಾರುಕಟ್ಟೆ ಹಾಗೂ ನಗರದ ಇತರ ಪ್ರಮುಖ ಸ್ಥಳಗಳನ್ನು ಸೈಕಲ್‌ನಲ್ಲಿ ಸುತ್ತಾಡಿ ನೋಡಲು ಈ ವ್ಯವಸ್ಥೆಯನ್ನು ಬಳಸುತ್ತಿದ್ದರು. ದಸರಾ ಸಂದರ್ಭದಲ್ಲಿಯೂ ಪ್ರವಾಸಿಗರಿಂದ ಸೈಕಲ್‌ಗಳಿಗೆ ಬೇಡಿಕೆ ವ್ಯಕ್ತವಾಗುತ್ತಿತ್ತು.

ಇತ್ತೀಚಿನ ವರದಿಗಳ ಪ್ರಕಾರ, ಪ್ರತಿದಿನ ಸರಾಸರಿ 300 ರಿಂದ 400 ಜನರು ಈ ಸೇವೆ ಬಳಸುತ್ತಿದ್ದರು. ಆರಂಭದಿಂದ ಇಲ್ಲಿಯವರೆಗೆ 20 ಸಾವಿರಕ್ಕೂ ಹೆಚ್ಚು ಜನರು ಟ್ರಿಣ್ ಟ್ರಿಣ್‌ಗೆ ನೋಂದಣಿ ಮಾಡಿಕೊಂಡಿದ್ದರು. ಹೀಗಾಗಿ ಜನರಿಂದ ಸಂಪೂರ್ಣವಾಗಿ ತಿರಸ್ಕೃತವಾದ ಯೋಜನೆ ಇದಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಸ್ಥಗಿತಕ್ಕೆ ಕಾರಣವಾದ ನಿರ್ವಹಣಾ ವೆಚ್ಚ:

ಟ್ರಿಣ್ ಟ್ರಿಣ್ ಸೇವೆ ಸ್ಥಗಿತಗೊಳ್ಳಲು ಪ್ರಮುಖ ಕಾರಣ ನಿರ್ವಹಣಾ ವೆಚ್ಚದ ಹೆಚ್ಚಳ. ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಸಂಸ್ಥೆಯು ನಿರ್ವಹಣಾ ವೆಚ್ಚದ ಸಮಸ್ಯೆ ಎದುರಿಸಲು ಪ್ರಾರಂಭಿಸಿತು. ಸೈಕಲ್‌ಗಳ ದುರಸ್ತಿ, ಬಿಡಿಭಾಗಗಳ ಬದಲಾವಣೆ, ನಿಲ್ದಾಣಗಳ ನಿರ್ವಹಣೆ ಸೇರಿದಂತೆ ಹಲವು ವೆಚ್ಚಗಳು ಸಂಸ್ಥೆಗೆ ಹೊರೆಯಾಗಿದ್ದವು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಇದ್ದರೂ ಕಾರ್ಯಾಚರಣೆಯಲ್ಲಿ ಉಂಟಾಗುತ್ತಿದ್ದ ನಷ್ಟವನ್ನು ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅ.31 ರಿಂದ ಸೇವೆ ಸ್ಥಗಿತಗೊಳಿಸಿದೆ.

ಪರಿಸರ ಸ್ನೇಹಿಯಾದ ಟ್ರಿಣ್ ಟ್ರಿಣ್ ಸೈಕಲ್ ಸೇವೆಯು ದೇಶಕ್ಕೆ ಮಾದರಿಯಾಗಿದೆ. ಯಾವ ಕಾರಣಕ್ಕೆ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಸಂಸ್ಥೆ ಸೇವೆ ಸ್ಥಗಿತಗೊಳಿಸಿದೆ ಎಂಬ ಮಾಹಿತಿ ಇಲ್ಲ. ಈ ಕುರಿತು ಅವರೊಂದಿಗೆ ಚರ್ಚೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಈ ಸೇವೆಯನ್ನು ಸ್ಥಗಿತಗೊಳಿಸಲು ಅವಕಾಶ ನೀಡುವುದಿಲ್ಲ.

ಎಂ.ಕೆ. ಸವಿತಾ, ಆಯುಕ್ತರು, ನಗರ ಪಾಲಿಕೆ

-------------------