ಜಿಲ್ಲೆ

ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ಬಾಲಕ

ಮೈಸೂರು: ಪಾರ್ಶ್ವವಾಯು ಪೀಡಿತ ತನ್ನ ಅಕ್ಕನ ಆರೈಕೆಗಾಗಿ ಶಾಲೆಯನ್ನೇ ತೊರೆದು ಸಂಕಷ್ಟದಲ್ಲಿದ್ದ ಬಾಲಕನಿಗೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಸಹಾಯಹಸ್ತ ನೀಡಿದ್ದಾರೆ.

ಎಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದ ಮಂಜುಳಾ ಮತ್ತು ಕುಮಾರ್ ದಂಪತಿ ಪುತ್ರ ಆಕಾಶ್ (15) ಹಾಗೂ ತನ್ನ ಅಕ್ಕ ಅನುಷಾ (17) ಪಾಲಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಸೋಮವಾರ ನಗರದ ಚಿಗುರು ಆಶ್ರಮಕ್ಕೆ ಅನುಷಾಳನ್ನು ಸೇರಿಸಿದ್ದು, ಆಕಾಶ್‌ನನ್ನು ಮೈಸೂರಿನ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ಸೇರಿಸಲಾಗಿದೆ.

ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ಅನುಷಾಳನ್ನು ಕೆಲ ದಿನಗಳಲ್ಲಿ ವೈದ್ಯಕೀಯ ಸೌಲಭ್ಯವಿರುವ ಕೇಂದ್ರಕ್ಕೆ ದಾಖಲಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ದಿವಾಕರ್ ತಿಳಿಸಿದರು

ಗ್ರಾಮದ ಸಮೀಪದಲ್ಲಿರುವ ಪ್ರೌಢಶಾಲೆಯಲ್ಲಿ ಆಕಾಶ್ 8ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಅನಾರೋಗ್ಯದಿಂದ ತಂದೆ ನಿಧನರಾದರು. ಇದಾದ ಎರಡು ತಿಂಗಳಲ್ಲೇ ತಾಯಿಯೂ ಮರಣ ಹೊಂದಿದರು. ಅಕ್ಕನ ಆರೈಕೆ ಹಾಗೂ ಮನೆ ನಿರ್ವಹಣೆಗಾಗಿ ಶಾಲೆಯನ್ನು ತ್ಯಜಿಸಿದ ಆಕಾಶ್, ಕೂಲಿ ಮಾಡುವಲ್ಲಿ ನಿರತನಾಗಿದ್ದ

ಅಕ್ಕನ ಆರೈಕೆಗಾಗಿ ತಮ್ಮ ಶಾಲೆಯನ್ನು ತೊರೆದಿದ್ದ ಮಾನವೀಯ ಅಂತಃಕರಣ ಮುಟ್ಟುವ ಈ ಘಟನೆ ಬೆಳಕಿಗೆ ಬಂದಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಪಿ.ಮಣಿವಣ್ಣನ್ ಹಾಗೂ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜನಸ್ನೇಹಿ ಸಹಾಯವಾಣಿ ಕೇಂದ್ರ ಈ ವರದಿಯನ್ನು ಗಮನಿಸಿ ಪರಿಹಾರ ಕ್ರಮಕ್ಕಾಗಿ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿತ್ತು. ಅದರಂತೆಯೇ ತಹಸೀಲ್ದಾರರು ಸೇರಿದಂತೆ ತಾಲೂಕಿನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮಕ್ಕೆ ಮುಂದಾದರು

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ರೇವಣ್ಣ ಅವರು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಆಕಾಶ್ ಈ ವರ್ಷವೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಕೋರಿ ಡಿಡಿಪಿಐಗೆ ಪತ್ರ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ, ಈ ಪ್ರಕರಣದ ಸಂಬಂಧ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರೊಂದಿಗೆ ಚರ್ಚಿಸಿದ್ದರು. ಬಾಲಕನ ಹಾಜರಾತಿ ಕಡಿಮೆ ಇರುವುದರಿಂದ ಈ ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗದು. ಆತ ಪರೀಕ್ಷೆಗೆ ಯಾವುದೇ ಸಿದ್ಧತೆ ನಡೆಸಿಲ್ಲ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ತರಗತಿಗೆ ಹಾಜರಾಗಿ ಪರೀಕ್ಷೆ ಬರೆಯಲಿ. ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಸಲಹೆ ನೀಡಿದ್ದರು.


ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದವರೆಗೆ ಬಾಲಕನನ್ನು ಮೈಸೂರಿನಲ್ಲಿರುವ ಬಾಲಕರ ಬಾಲಮಂದಿರದಲ್ಲಿ ಇರಿಸಿ ಅಗತ್ಯ ಮೂಲಸೌಲಭ್ಯದೊಂದಿಗೆ ಸೇತುಬಂದ ಕಾರ್ಯಕ್ರಮದಡಿ ಶಿಕ್ಷಣ ಕೊಡಿಸಲಾಗುವುದು. ಬಳಿಕ 10ನೇ ತರಗತಿಗೆ ಹಾಜರಾಗಿ ಶಿಕ್ಷಣ ಪಡೆದು ಪರೀಕ್ಷೆ ತೆಗೆಕೊಳ್ಳಲಿದ್ದಾನೆ. ಇವರ ರಕ್ಷಣಾ ತಂಡದಲ್ಲಿ ಸಮಾಜ ಸೇವಕಿ ಎಂ.ಡಿ.ರಾಧಾ, ಆಪ್ತ ಸಮಾಲೋಚಕರಾದ ಮಮತಾ, ರವಿಕುಮಾರ್, ಶ್ರೀನಿವಾಸ ರಾಜೇ ಅರಸ್ ಕಾರ್ಯನಿರ್ವಹಿಸಿದ್ದರು.