ಮುಂಡರಗಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯಲ್ಲಿ ಎಮ್ಮೆಗೆ ನೀರು ಕುಡಿಸಲು ತೆರಳಿದ್ದ 14 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಹಾರೋಗೇರಿ- ಬಸಾಪುರ ಗ್ರಾಮದ ಮಧ್ಯೆದಲ್ಲಿ ಕಾಲುವೆಯಲ್ಲಿ ಸಂಭವಿಸಿದೆ.
ತಾಲೂಕಿನ ಹಾರೋಗೇರಿ ಗ್ರಾಮದ ಅಭಿಷೇಕ ಮೈಲಪ್ಪ ಮಾದರ (14) ಮೃತ ಬಾಲಕ. ಅಭಿಷೇಕ ಹಾಗೂ ಫಕೀರೇಶ ಇಬ್ಬರೂ ಎಮ್ಮೆ ಮೇಯಿಸಲು ತೆರಳಿದ್ದರು.
ಹಾರೋಗೇರಿ- ಬಸಾಪುರ ನಡುವೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಖ್ಯಕಾಲುವೆಯಲ್ಲಿ ಎಮ್ಮೆಗೆ ನೀರು ಕುಡಿಸಲು ಹೋಗಿದ್ದಾಗ ಅಭಿಷೇಕ ಮಾದರ ಕಾಲು ಜಾರಿ ಕಾಲುವೆಗೆ ಬಿದ್ದು ನೀರಿನಲ್ಲಿ ಮುಳುಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಅಭಿಷೇಕನ ತಂದೆ, ಸ್ಥಳೀಯ ಜನರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ ಅಭಿಷೇಕನ ಶವವನ್ನು ಹೊರಗಡೆ ತೆಗೆದಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.