ಜಿಲ್ಲೆ

ಎರಡು ಎಕರೆ ಜಮೀನಲ್ಲಿ ಭರಪೂರ ಕೃಷಿ

* ರಾಗಿ, ಮಾವು, ಹೈನುಗಾರಿಕೆ ಜತೆಗೆ ಮೇಕೆ, ಕೋಳಿ ಸಾಕಣೆ

* ಹೊಸದೊಡ್ಡಿ ಗ್ರಾಮದ ಗೋಪಾಲ್​ ಯಶೋಗಾಥೆ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ರಾಗಿ, ಮಾವು ಕೃಷಿ ಜತೆಗೆ ಹೈನುಗಾರಿಕೆ, ಮೇಕೆ, ನಾಟಿ ಕೋಳಿ ಸಾಕಾಣಿಕೆ ಮೂಲಕ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಂಡು ಯಶಸ್ಸು ಕಾಣುತ್ತಿರುವ ಹಲವು ಮಂದಿ ಯಶಸ್ವಿ ರೈತರು ಇಂದು ನಮ್ಮೊಡನೆ ಕಾಣುತ್ತಿದ್ದಾರೆ.

ಅಂತಹ ಸಾಲಿನಲ್ಲಿ ರಾಮನಗರ ತಾಲೂಕಿನ, ಕೈಲಾಂಚ ಹೋಬಳಿಯ ಹೊಸದೊಡ್ಡಿ ಗ್ರಾಮದ ರೈತ ಗೋಪಾಲ್​ ಕಾಣುತ್ತಾರೆ. ಕೃಷಿ ಜತೆಗೆ ಉಪ ಕಸುಬನ್ನು ಪರಿಪೂರ್ಣವಾಗಿ ಬಳಸಿಕೊಂಡು ಕೃಷಿಯಲ್ಲಿ ಖುಷಿ ಕಾಣುತ್ತಾ ಯಶಸ್ಸಿನ ಮೆಟ್ಟಿಲು ಏರಿದ್ದಾರೆ.

ಇವರಿಗಿರುವ 2 ಎಕರೆ ಜಮೀನಿನಲ್ಲೇ ತೆಂಗು, ರಾಗಿ, ಮಾವು ಕೃಷಿ ನಡೆಸುತ್ತಿದ್ದಾರೆ. ಒಂದು ಬೋರ್​ವೆಲ್​ ಕೊರೆಸಿದ್ದು, ನೀರಾವರಿ ಪ್ರದೇಶದಲ್ಲಿ ರೇಷ್ಮೆ, ಮುಸುಕಿನ ಜೋಳ ಬೆಳೆಯುತ್ತಿದ್ದಾರೆ. ರೇಷ್ಮೆಗೆ ಹನಿ ನೀರಾವರಿ ಅಳವಡಿಸಿಕೊಂಡು ಜಾನುವಾರು ಮೇವಿಗೆ ತುಂತುರು ನೀರಾವರಿ ಅಳವಡಿಸಿಕೊಂಡು ನೀರಿನ ಕೊರತೆ ನೀಗಿಸಿಕೊಂಡಿದ್ದಾರೆ. ಗೋಪಾಲ್​ ಮೇಕೆ ಸಾಕಾಣಿಕೆಯಲ್ಲಿಯೂ ಯಶಸ್ಸಿನ ಮೈಲಿಗಲ್ಲು ಏರಿದ್ದಾರೆ. ಮೊದಲು ರೇಷ್ಮೆ ಅವಲಂಬಿಸಿದ್ದ ಗೋಪಾಲ್​ ಅದರಲ್ಲಿ ಅಂತಹ ಯಶಸ್ಸು ಸಿಗದ ಕಾರಣ ರಾಗಿ, ಮುಸುಕಿನ ಜೋಳ ಜತೆಗೆ ಉಪ ಕಸುಬುಗಳಾಗಿ ಮೇಕೆ ಸಾಕಾಣಿಕೆ, ನಾಟಿ ಕೋಳಿ ಸಾಕಾಣಿಕೆ, ಹೈನುಗಾರಿಕೆ ಅವಲಂಬಿಸಿ ಲಾಭ ಕಂಡುಕೊಂಡಿದ್ದಾರೆ. ಇವರ ಕೃಷಿಗೆ ಬೆನ್ನೆಲುಬಾಗಿ ಕುಟುಂಬ ನಿಂತಿದೆ.

ಯಂತ್ರ ಬಳಕೆ :

ಹಸು, ಮೇಕೆಗಳಿಗೆ ಆಧುನಿಕ ಮೇವು ಪದ್ಧತಿ ಅಳವಡಿಸಿಕೊಂಡು ಮೆಕ್ಕೆ ಜೋಳ ತಾವೇ ಬೆಳೆದು ಕಟಾವು ಮಾಡಿ ಯಂತ್ರದಲ್ಲಿ ಮೇವು ಕತ್ತರಿಸಿ ಆಧುನಿಕ ರೀತಿಯಲ್ಲಿ ಆಹಾರ ಪದ್ಧತಿಯನ್ನು ಜಾನುವಾರುಗಳಿಗೆ ಅಳವಡಿಸಿ ಮೇವು ಅನಗತ್ಯವಾಗಿ ಪೋಲಾಗುವುದನ್ನು ತಪ್ಪಿಸಿದ್ದಾರೆ.

ಕೊಟ್ಟಿಗೆ ಗೊಬ್ಬರ :

ಮಾವು, ರಾಗಿ, ಮುಸುಕಿನ ಜೋಳ, ಜಾನುವಾರು ಮೇವು, ಅಲಸಂದೆ, ತೊಗರಿ, ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರವನ್ನಷ್ಟೇ ಉಪಯೋಗಿಸಿ ರಾಸಾಯನಿಕ ಗೊಬ್ಬರಕ್ಕೆ ಮಿತಿ ಹೇರಿದ್ದಾರೆ. ಬೆಳೆಗೆ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ನೀಡಿ ಸಾವಯವ ಕೃಷಿಯತ್ತ ಚಿತ್ತಹರಿಸಿದ್ದಾರೆ.

ಜಾನುವಾರು ಸಾಕಣೆ

ಮಿಶ್ರತಳಿಯ ಐದು ಹಸು ಸಾಕಣೆ ಮಾಡಿದ್ದು ಉತ್ತಮ ಹಾಲು ಉತ್ಪಾದಿಸಿ ಲಾಭ ಕಾಣುತ್ತಿದ್ದಾರೆ. ಜತೆಗೆ ಮೇಕೆಶೆಡ್​ ನಿರ್ಮಾಣ ಮಾಡಿ ಆಧುನಿಕ ಪದ್ಧತಿಯಲ್ಲಿ ಮೇಕೆ ಸಾಕಣೆ ಕೈಗೊಂಡಿದ್ದಾರೆ. ಈಗಾಗಲೇ 60ಕ್ಕೂ ಹೆಚ್ಚು ಮೇಕೆಗಳು ಇವರ ಬಳಿ ಇವೆ.

ಕೈಹಿಡಿದ ನಾಟಿ ಕೋಳಿ, ಮೇಕೆ ಸಾಕಾಣಿಕೆ :

ಮೊದಲು ಐದು ಹತ್ತು ನಾಟಿಕೋಳಿ ಒಂದೆರಡು ಮೇಕೆಗಳಿಗಷ್ಟೇ ಸೀಮಿತವಾಗಿದ್ದ ಗೋಪಾಲ್​ ಸರ್ಕಾರದ ನರೇಗಾ ಯೋಜನೆ ಸಹಕಾರ ಪಡೆದು ಆಧುನಿಕ ಶೈಲಿಯಲ್ಲಿ ನಾಟಿ ಕೋಳಿ, ಮೇಕೆ ಸಾಕಾಣಿಕೆಗೆ ಒತ್ತು ಕೊಟ್ಟ ಪರಿಣಾಮ ಇಂದು ಕಿರು ಉದ್ಯಮವಾಗಿ ನಾಟಿ ಕೋಳಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಲಾಭ ಪಡೆಯುತ್ತಿದ್ದಾರೆ.

ವಿಸ್ತರಣೆ :

ತೆಂಗು, ಮಾವಿನ ತೋಟಗಳ ಜಮೀನಿನ ಇಕ್ಕೆಲಗಳಲ್ಲಿ ಅರಣ್ಯ ಕೃಷಿ ಮರ ನೆಟ್ಟು ಪೋಷಣೆ ಮಾಡಿರುವ ಗೋಪಾಲ್​ ಹನಿ ನೀರಾವರಿ ಮೂಲಕ ಮತ್ತಷ್ಟು ಜಾಗದಲ್ಲಿ ತೊಗರಿ, ಅಲಸಂದೆ, ಮುಸುಕಿನ ಜೋಳ ಕೃಷಿಗೆ ಉತ್ತೇಜನ ನೀಡಲು ತಯಾರಿ ನಡೆಸಿದ್ದಾರೆ. ಜತೆಗೆ ಲಾಭ ತರುವ ವಿದೇಶಿ ತಳಿ ಮಾವು ಬೆಳೆಯಲು ಆಸಕ್ತಿ ವಹಿಸಿದ್ದಾರೆ.

ಆನೆಗಳ ನಿಯಂತ್ರಣಕ್ಕೆ ಸೋಲಾರ್​ ತಂತಿ ಬೇಲಿ

ಗೋಪಾಲ್​ ಅವರ ಜಮೀನಿಗೆ ಹೊಂದಿಕೊಂಡಂತೆ ತೆಂಗಿನಕಲ್ಲು ಅರಣ್ಯ ಪ್ರದೇಶವಿದ್ದು ನಿರಂತರವಾಗಿ ಆನೆಗಳ ಉಪಟಳ ಹೊಸದೊಡ್ಡಿ ಕಾಡನಕುಪ್ಪೆ ಭಾಗದಲ್ಲಿದೆ. ಅರಣ್ಯದಿಂದ ಅರಣ್ಯಕ್ಕೆ ಓಡಾಟ ನಡೆಸುವ ಸಂದರ್ಭದಲ್ಲಿ ಗೋಪಾಲ್​ ಅವರ ಜಮೀನಿನ ಮೇಲೆ ದಾಳಿ ನಡೆಸಿ ಫಸಲು ನಷ್ಟದಲ್ಲಿ ತೊಡಗುತ್ತವೆ. ಮಾವು, ತೆಂಗು ನೀರಾವರಿ ಪರಿಕರ ಫಸಲು ನಷ್ಟ ಹೀಗೆ ಆನೆಗಳ ಉಪಟಳದಿಂದ ಬಸವಳಿದ ಗೋಪಾಲ್​ ತಮ್ಮ ಎರಡು ಎಕರೆ ಪ್ರದೇಶಕ್ಕೆ ಸೋಲಾರ್​ ತಂತಿ ಅಳವಡಿಸಿಕೊಂಡಿದ್ದಾರೆ.

ಬಾಳೆ ಸೇರಿ ಹಲವು ಹಣ್ಣಿನ ಬೆಳೆ ಬೆಳೆಯಲು ಮುಂದಾಗಿದ್ದೆ. ಆದರೆ ವಿಪರೀತ ಆನೆ ಕಾಟವಿದೆ. ಹಲವು ಬಾರಿ ಆನೆಗಳು ದಾಳಿ ನಡೆಸಿ ನೀರಾವರಿ ಪರಿಕರ, ಫಸಲು ನಾಶ ಮಾಡಿವೆ. ಇದರಿಂದ ರಾಗಿ, ಮಾವು ಕೃಷಿ ಜತೆಗೆ ನರೇಗಾ ಯೋಜನೆ ನೆರವು ಪಡೆದು ಮೇಕೆ, ಹೈನುಗಾರಿಕೆ ನಾಟಿ ಕೋಳಿ ಸಾಕಾಣಿಕೆಗೆ ಒತ್ತು ನೀಡಿದ್ದೇನೆ. ಇವು ನನ್ನ ಕೈ ಹಿಡಿದಿವೆ. ಕೃಷಿಯಲ್ಲಿ ಯಶಸ್ಸು ಸಾಧಿಸಬೇಕೆಂಬ ತುಡಿತ ನನ್ನಲ್ಲಿದ್ದು ನನ್ನ ಕೃಷಿಗೆ ನಮ್ಮ ಕುಟುಂಬ ಉತ್ತೇಜನ ನೀಡುತ್ತಿದೆ. ಗೋಪಾಲ್​, ರೈತ, ಹೊಸದೊಡ್ಡಿ
ಬನ್ನಿಕುಪ್ಪೆ ಗ್ರಾಪಂ ನರೇಗಾ ಯೋಜನೆಯಲ್ಲಿ ವೈಯಕ್ತಿಕ ಮತ್ತು ಸಮುದಾಯ ಕೆಲಸಗಳಿಗೆ ಆದ್ಯತೆ ನೀಡಿದೆ. ರೈತ ವರ್ಗದ ಬದು ನಿರ್ಮಾಣ, ಕುರಿ, ಕೋಳಿ, ಮೇಕೆಶೆಡ್​, ದನದ ಕೊಟ್ಟಿಗೆ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಹೆಚ್ಚಿನ ರೈತರು ಯೋಜನೆ ಲಾಭ ಪಡೆಯುತ್ತಿದ್ದಾರೆ. ರೈತ ಗೋಪಾಲ್​ ನರೇಗಾ ಯೋಜನೆಯಲ್ಲಿ ಮೇಕೆಶೆಡ್​ ಮತ್ತು ದನದ ಕೊಟ್ಟಿಗೆ ನಿರ್ಮಾಣ ಮಾಡಿ ಯೋಜನೆಯ ಲಾಭ ಪಡೆದಿದ್ದಾರೆ.  ಶಿವಕುಮಾರ್​, ಪಿಡಿಒ, ಬನ್ನಿಕುಪ್ಪೆ ಗ್ರಾಪಂ