ಬೇಲೂರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಗೃಹಕ್ಕೆ ಕೊಳವೆ ಬಾವಿ ಕೊರೆಸಿ ನೀರು ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಂಡಿರುವುದು.  
ಜಿಲ್ಲೆ

ಸಾರಿಗೆ ಬಸ್ ನಿಲ್ದಾಣದಲ್ಲಿ ಕೊನೆಗೂ ಕೊರೆಸಿದ ಕೊಳವೆ ಬಾವಿ

ಬೇಲೂರು: ಕೊನೆಗೂ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಗೃಹಕ್ಕೆ ಕೊಳವೆ ಬಾವಿ ಕೊರೆಸಿ ನೀರು ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

‘ಬೇಲೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ’, ಶೌಚಗೃಹ ಇದ್ದರೂ ನೀರಿಲ್ಲ ಎಂಬ ತಲೆ ಬರಹದಡಿ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕೊನೆಗೂ ಎರಡು ದಿನದ ಹಿಂದೆ ಕೊಳವೇ ಬಾವಿ ಕೊರೆಸಿ ನೀರು ಪೂರೈಸಲು ಸಿದ್ಧತೆ ಕೈಗೊಂಡಿದ್ದಾರೆ.

ಪ್ರವಾಸಿ ತಾಣವಾಗಿರುವ ಬೇಲೂರಿಗೆ ರಾಜ್ಯ ಸೇರಿದಂತೆ ದೇಶ ವಿದೇಶಗಳಿಂದ ಪ್ರವಾಸಿಗರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಆಗಮಿಸುತ್ತಾರೆ. ದೂರದೂರುಗಳಿಂದ ಬಂದವರು, ಕಾಯಿಲೆಗಳಿಂದ ಬಳಲುವವರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಬಸ್ ನಿಲ್ದಾಣದಲ್ಲಿ ಶೌಚಗೃಹಕ್ಕೆ ಹೋಗುತ್ತಾರೆ. ಆದರೆ ಒಂದು ತಿಂಗಳಿಂದ ಬಸ್ ನಿಲ್ದಾಣದಲ್ಲಿದ್ದ ಕೊಳವೆ ಬಾವಿ ಕೆಟ್ಟು ನಿಂತಿದ್ದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದರಿಂದ ನೀರಿಲ್ಲದೆ ಶೌಚಗೃಹದ ಗೇಟ್‌ಗಳಿಗೆ ಬೀಗ ಜಡಿಯಲಾಗಿತ್ತು. ಇದನ್ನು ನೋಡಿ ಜನರು ವಾಪಸ್ ಹೋಗುವಂತಾಗಿತ್ತು. ಜತೆಗೆ ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರು ತಂದು ಹಾಕುತ್ತಿದ್ದರಿಂದ ಶೌಚಗೃಹದಲ್ಲಿ ನೀರಿಲ್ಲದೆ ಯಾರೂ ಒಳ ಹೋಗದಂತಾಗಿತ್ತು. ಪ್ರಯಾಣಿಕರು ನಿಲ್ದಾಣದ ಅಧಿಕಾರಿಗಳೊಂದಿಗೆ ಜಗಳ ಮಾಡಿಕೊಂಡಿದ್ದರು.

ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಅವರು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತ್ತೆ ಸೂಚಿಸಿದ್ದರಿಂದ ಎಚ್ಚೆತ್ತ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕೊನೆಗೂ ಎರಡು ದಿನದ ಹಿಂದೆ ಕೊಳವೆ ಬಾವಿ ಕೊರೆಸಿದ್ದು, ತಕ್ಷಣವೇ ವಿದ್ಯುತ್ ಸಂಪರ್ಕದೊಂದಿಗೆ ಪೈಪ್‌ಲೈನ್ ಮಾಡಿಸಿ ಶೌಚಗೃಹಕ್ಕೆ ನೀರು ಕೊಡುವುದಕ್ಕೆ ಸಿದ್ಧತೆ ಕೈಗೊಂಡಿದ್ದಾರೆ.