ಭಟ್ಕಳ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ಯೂಂದು ಕುಮಟಾ ವ್ಯಾಪ್ತಿಯಲ್ಲಿ ಮೀನುಗಾರಿಕೆ ಮುಗಿಸಿ ಮರಳಿ ತೆರಳುವಾಗ ಭಟ್ಕಳದ ಸಮುದ್ರದಲ್ಲಿ ಮುಳುಗಿದ್ದು, ಬೋಟ್ನಲ್ಲಿದ್ದ ಚಾಲಕ ಸೇರಿ ಐವರು ಮೀನುಗಾರರನ್ನು ಸ್ಥಳೀಯ ನಾಡದೋಣಿಯ ಮೀನುಗಾರರು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಅಶ್ವಿನಿ ಸುರೇಶ ಅವರಿಗೆ ಸೇರಿದ ವಿನಶ್ ಬೋಟ್ ಭಟ್ಕಳ ಬಳಿಯ ಸಮುದ್ರದಲ್ಲಿ ಮುಳುಗಡೆಯಾಗಿದೆ. ಉಮೇಶ ಮೊಗೇರ ಎನ್ನುವ ಚಾಲಕ ಫೆ. 2ರಂದು ಮಲ್ಪೆಯಿಂದ ಮೀನುಗಾರಿಕೆಗೆಂದು 5 ಜನ ಮೀನುಗಾರರೊಂದಿಗೆ ತೆರಳಿದ್ದರು. ಕುಮಟಾ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸಿ ಮರಳಿ ತೆರಳುವಾಗ ಬುಧವಾರ ಭಟ್ಕಳ ಬಳಿಯ ಸಮುದ್ರದಲ್ಲಿ ಬೋಟಿನ ಅಡಿಭಾಗಕ್ಕೆ ಏನೋ ತಗುಲಿ ಬೋಟಿನೊಳಗೆ ನೀರು ತುಂಬಿ ಮುಳುಗಡೆಯಾಗುವ ಹಂತಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಭಟ್ಕಳದ ಸ್ವರ್ಣಗೌರಿ ಎನ್ನುವ ನಾಡದೋಣಿಯಲ್ಲಿದ್ದ ರಾಮಾ ಮೊಗೇರ, ಭರತ ಮೊಗೇರ ಅವರು ಬೋಟಿನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಅದಾದ ಬಳಿಕ ಬೋಟ್ ನೀರಿನಲ್ಲಿ ಸಂಪೂರ್ಣ ಮುಳುಗಿದ್ದು, ಅನೇಕ ಸಾಮಾಗ್ರಿಗಳ ಸಹಿತ ಸುಮಾರು 50ರಿಂದ 60ಲಕ್ಷ ರೂ. ನಷ್ಟವಾಗಿದೆ ಎಂದು ಚಾಲಕ ಉಮೇಶ ಮೊಗೇರ ಭಟ್ಕಳ ಕರಾವಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.