ಜಿಲ್ಲೆ

ಸಮುದ್ರ ಮಧ್ಯೆ ಕೆಟ್ಟುನಿಂತ ದೋಣಿ, 10 ಮೀನುಗಾರರ ರಕ್ಷಣೆ

ಮಂಗಳೂರು: ಮಂಗಳೂರು ಬಂದರಿನಿಂದ 20 ನಾಟಿಕಲ್ ಮೈಲಿ ದೂರ ಅರಬ್ಬಿ ಸಮುದ್ರದಲ್ಲಿ ಇಂಜಿನ್ ಕೆಟ್ಟು ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ ತಮಿಳುನಾಡಿನ 10 ಮೀನುಗಾರರನ್ನು ಭಾರತೀಯ ತಟರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.

ಲಾರ್ಡ್ ಆಫ್ ದಿ ಓಷನ್ ಎಂಬ ಮೀನುಗಾರಿಕಾ ದೋಣಿಯು ಅಪಾಯಕ್ಕೆ ಸಿಲುಕಿದ್ದು, ವಿಎಚ್‌ಎಫ್ ಸಂವಹನ ಉಪಕರಣ ಮೂಲಕ ರಕ್ಷಣೆ ಕೋರಿ ಸಂದೇಶ ರವಾನಿಸಿತ್ತು. ಮಂಗಳೂರಿನ ಮೆರಿಟೈಂ ರೆಸ್ಕೂೃ ಕೋಆರ್ಡಿನೇಶನ್ ಸೆಂಟರ್‌ನಲ್ಲಿ ಈ ಸಂದೇಶವನ್ನು ಪಡೆಯಲಾಗಿದ್ದು, ಗಸ್ತು ನಿರತ ನೌಕೆ ಸಿ448ನ್ನು ತಕ್ಷಣವೇ ನೆರವಿಗಾಗಿ ಕಳುಹಿಸಲಾಯಿತು. ಅಲ್ಲದೆ ಮಂಗಳೂರಿನಿಂದ ಐಸಿಜಿಎಸ್ ರಾಜ್‌ದೂತ್ ನೌಕೆಯನ್ನೂ ಕಳುಹಿಸಲಾಯಿತು.

ಮೇ 14ರಂದು ತೌಕ್ತೆ ಚಂಡಮಾರುತದಿಂದಾಗಿ ದೋಣಿ ಪೋರ್‌ಬಂದರಿನಲ್ಲಿ ನಿಂತಿತ್ತು. ಮೇ 19ರಂದು ಅಲ್ಲಿಂದ ಹೊರಟಿದ್ದು, ಗುರುವಾರ ಬೆಳಗ್ಗೆ ಇಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇಂಜಿನ್ ಕೆಲಸ ನಿಲ್ಲಿಸಿದ ಕಾರಣ ಅದನ್ನು ಅಲ್ ಬದ್ರಿಯಾ ಎಂಬ ಇನ್ನೊಂದು ಮೀನುಗಾರಿಕಾ ದೋಣಿಗೆ ಕಟ್ಟಿ ಸ್ವಲ್ಪ ದೂರ ತರಲಾಗಿದೆ. ಬಳಿಕ ಐಸಿಜಿಎಸ್ ರಾಜ್‌ದೂತ್ ಮಂಗಳೂರು ಹಳೇ ಬಂದರಿಗೆ ಎಳೆದು ತಂದಿದೆ. ಮುಂದಿನ ಕ್ರಮಕ್ಕಾಗಿ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ.