ಬೆಂಗಳೂರು: ವಿಶ್ವ ಪರಿಸರ ದಿನ ಮತ್ತು ಬೈಸಿಕಲ್ ದಿನಾಚರಣೆ ಪ್ರಯುಕ್ತ ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜೂ.5ರಂದು ಬೃಹತ್ ಸೈಕಲ್ ಜಾಥಾ ಏರ್ಪಡಿಸಿದೆ. 15 ಸಾವಿರಕ್ಕೂ ಹೆಚ್ಚು ಮಂದಿ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 'ಹೊಂದಿಸಿ ಬರೆಯಿಸಿ' ಸಿನಿಮಾ ತಂಡವೂ ಸಾಥ್ ನೀಡಲಿದೆ. ಶಿಂಕಾರಿ ಚಂಡೆ ಮೇಳ ಮೆರುಗು ನೀಡಲಿದೆ.
ವಿಜಯವಾಣಿ ಮತ್ತು ದಿಗ್ವಿಜಯ 24/7 ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಜೂ.5ರ ಬೆಳಗ್ಗೆ 6.30ಕ್ಕೆ ಜಾಥಾ ಹೊರಡಲಿದೆ. ಸೈಕಲ್ ಜಾಥಾದಲ್ಲಿ ಭಾಗವಹಿಸುವವರಿಗೆ ಟೀಶರ್ಟ್ ವಿತರಣೆ ಮತ್ತು ಬೆಳಗಿನ ಉಪಹಾರದ ವ್ಯವಸ್ಥೆ ಇರಲಿದೆ.
'ಹೊಂದಿಸಿ ಬರೆಯಿಸಿ' ತಂಡ: ಸೈಕಲ್ ಜಾಥಾದಲ್ಲಿ 'ಹೊಂದಿಸಿ ಬರೆಯಿಸಿ' ಸಿನಿಮಾ ತಂಡವೂ ಪಾಲ್ಗೊಂಡು ಮೆರುಗು ನೀಡಲಿದೆ. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ನವೀನ್ ಶಂಕರ್, ಶ್ರೀ, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಮತ್ತು ರಾಮೇನಹಳ್ಳಿ ಜಗನ್ನಾಥ್ ಅವರು ಸೈಕಲ್ ಏರಲಿದ್ದಾರೆ.
ಸೈಕಲ್ ಜಾಥಾ ಮಾರ್ಗ: ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ನಿಂದ ಹೊರಡುವ ಸೈಕಲ್ ಜಾಥಾ ಜೆಎಸ್‌ಎಸ್ ವೃತ್ತ- ಸೌತೆಂಡ್ ರಸ್ತೆ- ಸೌತ್ ಎಂಡ್ ವೃತ್ತ- ಆರ್.ವಿ. ರಸ್ತೆ- ಅಶೋಕ ಪಿಲ್ಲರ್- ಲಾಲ್‌ಬಾಗ್ ಸಿದ್ಧಾಪುರ ಗೇಟ್- ಲಾಲ್‌ಬಾಗ್ ಮುಖ್ಯದ್ವಾರ- ಕೃಂಬಿಗಲ್ ರಸ್ತೆ- ಲಾಲ್‌ಬಾಗ್ ಪಶ್ಚಿಮ ದ್ವಾರ- ವೈವಿಲಾಸ್ ರಸ್ತೆ- ನ್ಯಾಷನಲ್ ಕಾಲೇಜು ವೃತ್ತ- ಕೆ.ಆರ್. ರಸ್ತೆ- ನೆಟ್ಟಕಲ್ಲಪ್ಪ ವೃತ್ತ- ಅಯೋಧ್ಯೆ ಉಪಹಾರ್ ವೃತ್ತದಿಂದ ಅಂತಿಮವಾಗಿ ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ತಲುಪಲಿದೆ.
ಬೆಳಗ್ಗೆ 7.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಶ್ರೀ ರಾಮಕೃಷ್ಣ ವಿದ್ಯಾ ಮಂದಿರದ ಶ್ರೀ ಸ್ವಾಮಿ ತದ್ಯುಕ್ತಾನಂದ ಅವರು ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಂದಾಯ ಸಚಿವ ಆರ್.ಅಶೋಕ್, ಗೌರವಾನ್ವಿತ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಕೇತ್ರದ ಎಂಎಲ್ಸಿ ಎಂ.ಕೃಷ್ಣಪ್ಪ, ಅದಮ್ಯ ಚೇತನ ಸಂಸ್ಥೆಯ ಚೇರ್ಮನ್ ಡಾ.ತೇಜಸ್ವಿನಿ ಅನಂತಕುಮಾರ್, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಲಕ್ಷ್ಮೀ ಉಮೇಶ್ ಕಬ್ಬಾಳ್, ವಿಜಯವಾಣಿ ಪತ್ರಿಕೆಯ ಡೆಪ್ಯೂಟಿ ಎಡಿಟರ್ ರಾಘವೇಂದ್ರ ಗಣಪತಿ ಹಾಗೂ ಸೇರಿದಂತೆ ಬಿಎನ್‌ಎಂ ಸಂಸ್ಥೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗ ಉಪಸ್ಥಿತರಿರಲಿದ್ದಾರೆ.
ಆಸಕ್ತರು ಹೆಸರು ನೋಂದಾಯಿಸಿ: ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಲು 99 ರೂಪಾಯಿ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ.ನಂ. 99800 43809 ಸಂಪರ್ಕಿಸಿ. ಹೆಸರು ನೋಂದಾಯಿಸಿಕೊಳ್ಳಲು https://www.socialstories.in/event-details/bnm-cycle-street ಕ್ಲಿಕ್ ಮಾಡಿ.