ಜಿಲ್ಲೆ

ನಡುರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್​! 40 ಪ್ರಯಾಣಿಕರು ಅಪಾಯದಿಂದ ಪಾರು

arunakunigal

ಬೆಂಗಳೂರು: ಸುಮಾರು 40 ಮಂದಿ ಪ್ರಯಾಣಿಸುತ್ತಿದ್ದ ಬಿಎಂಟಿಸಿ ಬಸ್​ವೊಂದು ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಕೆ.ಆರ್​.ಮಾರುಕಟ್ಟೆ ಸಮೀಪದ ಚಾಮರಾಜಪೇಟೆಯ ಮಕ್ಕಳಕೂಟ ಬಳಿ ಸಂಭವಿಸಿದೆ.

ದೀಪಾಂಜಲಿನಗರ ಡಿಪೋಗೆ ಸೇರಿದ KA57 F1592 ನಂಬರ್​ನ ಬಸ್​ ಹೊಸಕೆರೆಹಳ್ಳಿಯಿಂದ ಕೆ.ಆರ್​.ಮಾರುಕಟ್ಟೆಗೆ ಸಂಚರಿಸುತ್ತಿತ್ತು. ಚಾಮರಾಜಪೇಟೆಯ ಮಕ್ಕಳಕೂಟ ಬಳಿ ಬಸ್​ ಬರುತ್ತಿದ್ದಂತೆ ಇಂಜಿನಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ.. ಬೆಂಕಿ... ಎಂದು ಡ್ರೈವರ್​ ಕೂಗಿದರು. ಕೂಡಲೇ ಬಸ್​ ನಿಲ್ಲಿಸಿ ಡ್ರೈವರ್​ ಮತ್ತು ಕಂಡಕ್ಟರ್​ ಇಬ್ಬರೂ ಕೆಳಗಿಳಿದು, ಪ್ರಯಾಣಿಕರಿಗೆ ಕೆಳಗೆ ಇಳಿಯಲು ನೆರವಾದರು. ನೋಡನೋಡುತ್ತಿದ್ದಂತೆ ಬಸ್​ನಲ್ಲಿ ಬೆಂಕಿಯ ಜ್ವಾಲೆ ವ್ಯಾಪಸಿತ್ತು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದೆ. ಪ್ರಯಾಣಿಕರಿಗೆ ಬೇರೆ ಬಸ್​ ವ್ಯವಸ್ಥೆ ಮಾಡಿ ಕಳುಹಿಸಲಾಯಿತು. ಸ್ಥಳದಲ್ಲಿ ಕೆಲ ಹೊತ್ತು ಆತಂಕಕಾರಿ ವಾತಾವಾರಣ ನಿರ್ಮಾಣವಾಗಿತ್ತು‌.