ಜಿಲ್ಲೆ

ಅಕಾಲಿಕ ವರ್ಷಧಾರೆ ಇಳುವರಿಗೆ ಹೊಡೆತ

ಲಕ್ಷೆ್ಮೕಶ್ವರ: ವಾಯುಭಾರ ಕುಸಿತದಿಂದಾಗಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದ ಬೆಳೆಗಳು ಹಾಳಾಗುತ್ತಿವೆ. ಅಕಾಲಿಕ ಮಳೆಯಿಂದಾಗಿ ಕೊಯ್ಲಿಗೆ ಬಂದಿರುವ ಬಳ್ಳಿಶೇಂಗಾ, ಮೆಣಸಿನಕಾಯಿ, ಹತ್ತಿ, ಮೆಕ್ಕೆಜೋಳ ಇನ್ನಿತರ ಬೆಳೆಗಳು ಮತ್ತು ಜಾನುವಾರುಗಳ ಹೊಟ್ಟು ಹಾಳಾಗುತ್ತಿದೆ. ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಹಿಂಗಾರು ಬೆಳೆಗಳಾದ ಜೋಳ, ಗೋಧಿ, ಕಡಲೆ ಬೆಳೆಗಳು ಬಹುತೇಕ ಚಳಿಗಾಲದ ಹವಾಮಾನದಿಂದಲೇ ಉತ್ತಲ ಫಲ ನೀಡುತ್ತವೆ. ಆದರೆ, ಅಕಾಲಿಕ ಮಳೆಯಿಂದ ರೋಗಬಾಧೆಗೆ ತುತ್ತಾಗುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನ ಯತ್ತಿನಹಳ್ಳಿ, ಯಳವತ್ತಿ, ಗೊಜನೂರ, ಅಕ್ಕಿಗುಂದ, ಬಟ್ಟೂರ, ಕುಂದ್ರಳ್ಳಿ ಸೇರಿ ವಿವಿಧೆಡೆ ಮಳೆ ಜೋರಾಗಿದೆ. ಇದರಿಂದ ಕೊಯ್ಲಿಗೆ ಬಂದಿರುವ ಮತ್ತು ಬಿತ್ತನೆಯಾಗಿರುವ ಬೆಳೆ ನೀರಿನಲ್ಲಿ ನಿಂತು ಹಾಳಾಗುವಂತಾಗಿದೆ. ಯಾವುದೇ ಮೂಲದ ಆದಾಯವಿಲ್ಲದ ರೈತರ ಬದುಕು ಸಂಕಷ್ಟದಲ್ಲಿದೆ. ಸರ್ಕಾರ ಬೆಳೆ ಹಾನಿ, ಬೆಳೆ ವಿಮೆ, ಬೆಳೆ ಪರಿಹಾರ ಕಲ್ಪಿಸುವ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಗೊಜನೂರ ರೈತ ಚನ್ನಪ್ಪ ಷಣ್ಮುಖಿ ಆಗ್ರಹಿಸಿದ್ದಾರೆ.