ಬೆಂಗಳೂರು: ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವಿಷಯದಲ್ಲಿ ಅಮಿತ್ ಷಾ ನೀಡಲಿರುವ ಸಂದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಯುತ್ತಿರುವಂತಿದೆ.
ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಸಚಿವ ಸಂಪುಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ದೆಹಲಿಗೆ ಹೋದ ನಂತರ ಮಾತಾಡ್ತೀನಿ ಎಂದಿದ್ದಾರೆ ಎಂದು ಚುಟುಕಾಗಿ ಹೇಳಿದರು.
ಶೇ.80 ಆದೇಶ: ಈಗಾಗಲೇ ತಿಳಿಸಿರುವಂತೆ ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಪ್ರಸ್ತಾವನೆಗಳ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶೇ.80 ಆದೇಶ ಹೊರಡಿಸಲಾಗಿದೆ. ಕಾನೂನು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಉಳಿದ ಶೇ.20ಕ್ಕೂ ಆದೇಶ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಅನುಷ್ಠಾನಕ್ಕೆ ಕಾಲಮಿತಿ: ಆದೇಶದ ಮುಂದಿನ ಹಂತವಾಗಿ ಅನುಷ್ಠಾನಕ್ಕೆ ಕಾಲಮಿತಿ ವಿಧಿಸಲೆಂದು ಪೂರ್ವ ನಿಗದಿಯಂತೆ ಇಲಾಖಾವಾರು ಸಭೆಗಳನ್ನು ಬುಧವಾರದಿಂದ ಆರಂಭಿಸಿದ್ದು, ಪ್ರತಿಯೊಂದು ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮದ ಅನುಸಾರ ಕಾಲಮಿತಿ ಗೊತ್ತುಪಡಿಸಲಿದ್ದು, ಇದೆಲ್ಲ ಆಡಳಿತಾತ್ಮಕ ಪ್ರಕ್ರಿಯೆ ಭಾಗವಾಗಿದೆ ಎಂದರು.
ಜಿಲ್ಲಾ ಆಡಳಿತಕ್ಕೆ ಚುರುಕು: ಮುಂದಿನ ವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಜತೆ ಚರ್ಚೆಗೆ ತಲಾ ಒಂದು ದಿನ ನಿಗದಿಪಡಿಸಿದ್ದು, ಜಿಲ್ಲಾ ಆಡಳಿತಕ್ಕೂ ಚುರುಕು ನೀಡಿ ಅಭಿವೃದ್ಧಿ ಕೆಲಸಗಳು ಹಾಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ವೇಗ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ತಿಳಿಸಿದರು.