ಜಿಲ್ಲೆ

ಗುರಾಯಿಸಿದ್ದಕ್ಕೆ ಬಿಹಾರ ಮೂಲದ ಖಾಸಗಿ ಸಂಸ್ಥೆ ನೌಕರನ ಇರಿದು ಕೊಂದ

ಚನ್ನಪಟ್ಟಣ: ಕ್ಷುಲ್ಲಕ ಕಾರಣಕ್ಕಾಗಿ ಯುವಕನನ್ನು ಇರಿದು ಕೊಲೆ ಮಾಡಲಾಗಿದೆ. ನಗರದ ಸಾತನೂರು ರಸ್ತೆಯ ಪುನೀತ್ ವೈನ್ ಸ್ಟೋರ್ ಬಳಿ ಬುಧವಾರ ರಾತ್ರಿ ಅವಘಡ ನಡೆದಿದ್ದು, ಬಿಹಾರ ಮೂಲದ ಕರಣ್ (19) ಮೃತ. ಎಲೆಕ್ಟ್ರಿಷಿಯನ್ ಆಗಿದ್ದ ಈತ ಬುಧವಾರ ರಾತ್ರಿ ಮನೆಗೆ ತೆರಳುತ್ತಿದ್ದಾಗ ಸಣ್ಣ ವಿಚಾರಕ್ಕೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲವು ಬಾರಿ ಎದೆಗೆ ಇರಿದು ಪರಾರಿಯಾಗಿದ್ದಾನೆ. ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಆಸ್ಪತ್ರೆಗೆ ರವಾನಿಸುವ ವೇಳೆ ಮೃತಪಟ್ಟಿದ್ದಾನೆ. ಗುರಾಯಿಸಿದ ಎಂಬ ಕಾರಣಕ್ಕೆ ಇರಿದಿದ್ದಾನೆ ಎನ್ನಲಾಗಿದೆ. ಹೋಟೆಲ್​ನಲ್ಲಿ ಊಟ ಮಾಡಿ ರೂಮಿನತ್ತ ತೆರಳುತ್ತಿದ್ದ ಕರಣ್​ಗೆ ಇಂದಿರಾ ಕಾಟೇಜ್ ನಿವಾಸಿ ನವೀದ್ ಎಂಬಾತ ನನ್ನನ್ನು ಗುರಾಯಿಸುತ್ತಿದ್ದೀಯ ಎಂದು ಕ್ಯಾತೆ ತೆಗೆದು ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಯುವಕನ ಸಂಬಂಧಿಕರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಎಎಸ್​ಪಿ ಕೆ. ರಾಮರಾಜನ್, ಸಿಪಿಐ ಸಿ.ವಸಂತ್, ಪಿಎಸ್​ಐ ಎಚ್.ಎಂ. ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಂಜಾ ಗಮಲು: ನಗರದ ಕೆಲವೆಡೆ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದ್ದು, ಈ ಘಟನೆಗೂ ಗಾಂಜಾ ಸೇವನೆಯೇ ಕಾರಣ. ಗಾಂಜಾ ಸೇವನೆಯಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಒಟ್ಟಾರೆ ಬದುಕು ಅರಸಿ ವಲಸೆ ಬಂದಿದ್ದ ಅಮಾಯಕ ಯುವಕ ತನ್ನದಲ್ಲದ ತಪ್ಪಿಗೆ ಸಾವಿಗೀಡಾಗಿರುವುದು ವಿಪರ್ಯಾಸದ ಸಂಗತಿ.