ಜಿಲ್ಲೆ

ವಿಷಯಾಂತರಕ್ಕಾಗಿ ಕಾಂಗ್ರೆಸ್‌ಗೆ ಮಹದಾಯಿ ನೆನಪು

ಹುಬ್ಬಳ್ಳಿ: ಮುಡಾ ಹಗರಣ ಹೊರಗಡೆ ಬಂದಿರುವ ಕಾರಣಕ್ಕೆ ಕಾಂಗ್ರೆಸ್‌ನವರಿಗೆ ಮಹದಾಯಿ ನೆನಪಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಕುಟುಕಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಪ್ರಗತಿ ಆಗಿದ್ದು ಬಿಜೆಪಿಯಿಂದ ಮಾತ್ರವೇ ಹೊರತು ಕಾಂಗ್ರೆಸ್‌ನಿಂದಲ್ಲ. ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಮಹದಾಯಿ ನೆನಪಾಗಿಲ್ಲ ಏಕೆ? ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರು ಕರ್ನಾಟಕಕ್ಕೆ ಒಂದು ಹನಿ ನೀರು ಬಿಡುವುದಿಲ್ಲ ಎಂದಿದ್ದರು. ಈ ರೀತಿ ನಮ್ಮ ಪಕ್ಷದ ನಾಯಕರು ಮಾತನಾಡಿಲ್ಲ. ಆದರೆ. ಮಹದಾಯಿ ವಿಚಾರವನ್ನು ನಾವು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಇದರಿಂದ ಹಿಂದೆ ಸರಿಯುವುದಿಲ್ಲ. ಕೇಂದ್ರ ಸರ್ಕಾರವು, ಕರ್ನಾಟಕ ಅಷ್ಟೇ ಅಲ್ಲ ಯಾವುದೇ ರಾಜ್ಯಕ್ಕೂ ಅನ್ಯಾಯ ಮಾಡಿಲ್ಲ. ಬರೀ ರಾಜ್ಯ ಮಾಡುವುದೇ ಕಾಂಗ್ರೆಸ್‌ನವರ ಕೆಲಸವಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ. ಇನ್ನೂ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿಲ್ಲ, ಆದರೆ ಈಗಲೇ ಸಿಎಂ ರೇಸ್ ನಡೆದಿದೆ. ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ಆರ್.ವಿ. ದೇಶಪಾಂಡೆ ಹೆಸರು ಮುಂಚೂಣಿಯಲ್ಲಿವೆ. ಡಿಸಿಎಂ ಡಿ.ಕೆ. ಶಿವಕುಮಾರ ಅವರು ನೆಕ್ಸ್ಟ್ ಸಿಎಂ ನಾನೇ ಎನ್ನುತ್ತಿದ್ದಾರೆ. ಮುಡಾ ಹಗರಣದಲ್ಲಿ ರಾಜ್ಯಪಲರ ಪರ ತೀರ್ಪು ಬರುವ ಸಾಧ್ಯತೆ ಇದೆ. ಆಗ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತ ಎಂದರು.
ಉತ್ತರ ಕರ್ನಾಟಕದ ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ ಅವರಿಗೆ ಸಿಎಂ ಸ್ಥಾನ ನೀಡಿದರೆ ಸ್ವಾಗತಿಸುತ್ತೇವೆ. ಕೈ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸಬೇಕೆಂಬುದು ನಮ್ಮ ಉದ್ದೇಶವಲ್ಲ. ಆ ಪರಿಸ್ಥಿತಿ ಅವರೇ ತಂದುಕೊಂಡಿದ್ದಾರೆ ಎಂದರು.