ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿದರು. 
ಜಿಲ್ಲೆ

ಚಿಕ್ಕ ವಯಸ್ಸಿದಲ್ಲೇ ವಿಜಯೇಂದ್ರಗೆ ದೊಡ್ಡ ಹುದ್ದೆ, ಬಿಎಸ್ವೈ ಮೇಲೆ ಗುರುತರ ಜವಾಬ್ದಾರಿ

ನವೀನ ಬಿ.ಎಂ

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಚಿಕ್ಕ ವಯಸ್ಸಿದಲ್ಲೇ ದೊಡ್ಡ ಹುದ್ದೆ ನೀಡಿದ್ದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಗುರುತರ ಜವಾಬ್ದಾರಿ ಇದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರು 28 ಲೋಕಸಭಾ ಕ್ಷೇತ್ರಗಳಲ್ಲಿ 30 ಸ್ಥಾನ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ನಮ್ಮ ಜಿಲ್ಲೆಯ ಹುಡುಗ ಒಳ್ಳೆಯ ಹುದ್ದೆಗೇರಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಅದು ಅವರ ಪಕ್ಷದ ಕಾರ್ಯಕ್ರಮ. ಅದರಿಂದ ನಮ್ಮ ಪಕ್ಷದ ಮೇಲೆ ಪ್ರಭಾವ ಬೀರುವುದಿಲ್ಲ ಎಂದರು.
ವಿಜಯೇಂದ್ರ ಅವರು ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಅದಕ್ಕೆ ಸಕಾಲ ಇದಾಗಿದೆ. ಪ್ರತಿಪಕ್ಷದಲ್ಲಿರುವ ಕಾರಣ ಸಿಎಂ ಸೇರಿ ಆಡಳಿತ ಪಕ್ಷದ ಬಗ್ಗೆ ಟೀಕೆಗಳನ್ನು ಮಾಡುವಾಗ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಸಂವೇಧನಾಶೀಲರಾಗಿರಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ವಿಜಯೇಂದ್ರ ಭೇಟಿಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ-ಜೆಡಿಎಸ್ ಹೋಂದಾಣಿಕೆ ಮಾಡಿಕೊಂಡಿವೆ. ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ಭೇಟಿ ಮಾಡಿರುವುದಲ್ಲಿ ವಿಶೇಷತೆಗಳಿಲ್ಲ. ಮುಂಬರುವ ಚುನಾವಣೆಗಳನ್ನು ಎದುರಿಸುವ ನಿಟ್ಟಿನಲ್ಲಿ ಅವರಿಬ್ಬರ ಭೇಟಿ ಸಹಜ. ಅದನ್ನು ಬಿಟ್ಟು ನಮ್ಮನ್ನು (ಕಾಂಗ್ರೆಸ್)ಭೇಟಿಯಾಗಲು ಸಾಧ್ಯವೇ ಪ್ರಶ್ನಿಸಿದರು.
ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಾಗ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತವೆ. ಆದರೆ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗಳಿಗೆ ತೊಂದರೆ ಇಲ್ಲ. ವಿದ್ಯಾವಂತರಿಗೆ ಸಂಬಂಧಿಸಿದ ಚುನಾವಣೆ ಇದಾಗಿದ್ದು ಯಾವುದೇ ಪರಿಣಾಮ ಬೀರುವುದಿಲ್ಲ. ಇಲ್ಲಿ ಚಿಹ್ನೆ ಮತ್ತು ವ್ಯಕ್ತಿ ಆಧಾರಿತವಾಗಿ ಚುನಾವಣೆ ನಡೆಯುತ್ತದೆಯೋ ವಿನಃ ಪಕ್ಷಗಳು ಮುಖ್ಯವಾಗುವುದಿಲ್ಲ ಎಂದರು.