ಅಂತರ ಶಾಲಾ ಮಟ್ಟದ ಸೀನಿಯರ್ ವಿಭಾಗದ ಸಾಂಸ್ಕೃತಿಕ ಹಬ್ಬವನ್ನು ಕೆ.ಆರ್.ಶ್ರೀಧರ್ ಉದ್ಘಾಟಿಸಿದರು. ಡಾ. ರೆಜಿ ಜೋಸೆಫ್, ಬಿ.ಎಲ್.ನೀಲಕಂಠ ಮೂರ್ತಿ, ಶ್ರೀಕಾಂತ ಎಂ.ಹೆಗ್ಡೆ, ಕೆ.ವಿ.ಶುಭಾ ಇತರರಿದ್ದರು.  
ಜಿಲ್ಲೆ

ಸಂಸ್ಕೃತಿಯಿಂದ ಉತ್ತಮ ಸಂಸ್ಕಾರ ರೂಪು

ಶಿವಮೊಗ್ಗ: ಪ್ರಕೃತಿ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಸಂಸ್ಕೃತಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸುತ್ತದೆ. ಸಾಂಸ್ಕೃತಿಕ ಆಚರಣೆಗಳು, ಉತ್ಸವಗಳು ಮಗುವಿನ ಮನಸ್ಸು ವಿಕೃತಗೊಳ್ಳದಂತೆ ತಡೆಯುತ್ತವೆ ಎಂದು ಜ್ಞಾನದೀಪ ವಿದ್ಯಾಸಂಸ್ಥೆಯ ಖಜಾಂಚಿ ಡಾ. ಕೆ.ಆರ್.ಶ್ರೀಧರ್ ಹೇಳಿದರು.

ಜ್ಞಾನದೀಪ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಸಿಬಿಎಸ್‌ಇ ಶಾಲೆಗಳ ಅಂತರ ಶಾಲಾ ಮಟ್ಟದ ಸೀನಿಯರ್ ವಿಭಾಗದ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿದ ಅವರು, ಶಾಲಾ ಹಂತದಲ್ಲಿಯೇ ಮಕ್ಕಳು ಸಾಂಸ್ಕೃತಿಕ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು ಉತ್ತಮ ಎಂದರು.
ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಚಾರ್ಯ ಶ್ರೀಕಾಂತ ಎಂ.ಹೆಗ್ಡೆ ಮಾತನಾಡಿ, ಸಾಂಸ್ಕೃತಿಕ ಉತ್ಸವಗಳು ನಮ್ಮೆಲ್ಲರನ್ನೂ ಒಂದುಗೂಡಿಸುವುದರ ಜತೆಗೆ ಶೈಕ್ಷಣಿಕ ಬೆಳವಣಿಗೆಗೆ ಸಹಾಯಕವಾಗುತ್ತವೆ. ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗುತ್ತದೆ. ವಿವಿಧ ಪ್ರದೇಶಗಳ ಸಾಂಸ್ಕೃತಿಕ ವೈವಿಧ್ಯ ವಿನಿಮಯವಾಗುವುದು ಇಂದಿನ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
15 ಸಿಬಿಎಸ್‌ಇ ಶಾಲೆಗಳ 30 ಶಿಕ್ಷಕರು, 221 ವಿದ್ಯಾರ್ಥಿಗಳು ಜಾನಪದ ನೃತ್ಯ, ದೇಶಭಕ್ತಿ ಗೀತೆಗಳ ಸಮೂಹ ಗಾಯನ ಹಾಗೂ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಉಪಪ್ರಾಚಾರ್ಯ ಡಾ. ರೆಜಿ ಜೋಸೆಫ್, ಶಿಕ್ಷಕಿ ಕೆ.ವಿ.ಶುಭಾ, ಜ್ಞಾನದೀಪ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಎಲ್.ನೀಲಕಂಠಮೂರ್ತಿ ಇತರರಿದ್ದರು.