ಬೆಂಗಳೂರು: ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳ ಚುನಾವಣೆ ನಡೆಯುತ್ತಿದ್ದು, ಇಂದು(ಶುಕ್ರವಾರ) ಬೆಳಗ್ಗೆ 7ಕ್ಕೆ ಮತದಾನ ಆರಂಭವಾಗಿದೆ.
ಕಲಬುರಗಿ ಪಾಲಿಕೆಯ 55 ವಾರ್ಡ್ಗಳಿಂದ 300 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 533 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಕಲಬುರಗಿಯಲ್ಲಿ ಮೋಡ ಕವಿದ ವಾತಾವರಣವಿದ್ದರೂ, ಮತದಾನ ಚುರುಕುಗೊಂಡಿದೆ.
ಹುಬ್ಬಳ್ಳಿ-ಧಾರವಾಡ ಪಾಲಿಕೆಯ 82 ವಾರ್ಡ್ಗಳಿಗೆ 420 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗ್ಗೆ 9 ಗಂಟೆ ವೇಳೆಗೆ ಶೇ.4.2% ಮತದಾನ ಆಗಿದೆ. 27ನೇ ವಾರ್ಡ್ನಲ್ಲಿ ಗಾಮನಗಟ್ಟಿಯಲ್ಲಿನ ಮತಗಟ್ಟೆ ಸಂಖ್ಯೆ 6, 7, 8, 9, 10ರಲ್ಲಿ ವಿವಿ ಪ್ಯಾಟ್ ಇಲ್ಲದೆ ಮತದಾನ ಸ್ಥಗಿತಗೊಂಡಿತ್ತು. ಅತ್ತ 52ನೇ ವಾರ್ಡ್ನಲ್ಲಿ ಬಿಜೆಪಿಯವರಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆಂದು ಆರೋಪಿಸಿ ಕೆ.ಆರ್.ಎಸ್ ಪಕ್ಷದವರು ಪ್ರತಿಭಟನೆಗೆ ಮುಂದಾಗಿದ್ದ ಘಟನೆ ನಡೆಯಿತು.
ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ಗಳ ಚುನಾವಣೆಯಲ್ಲಿ 385 ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದಾರೆ. ಬೆಳಗಾವಿಯಲ್ಲಿ 415 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆ 9 ಗಂಟೆ ವೇಳೆಗೆ ಶೇ.5.38 ಮತದಾನವಾಗಿದೆ.